ಚುನಾವಣೋತ್ತರ ಘರ್ಷಣೆ 15 ಮಂದಿ ವಿರುದ್ಧ ಕೇಸು

ಆಸ್ಪತ್ರೆಗೆ ದಾಖಲಾದ ವಲೇರಿಯನ್ ಕುಟಿನ್ಹಾ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಎಪಿಎಂಸಿ ಚುನಾವಣೆ ಫಲಿತಾಂಶದ ವಿಜಯೋತ್ಸವ ಹಿಂಸೆಗೆ ತಿರುಗಿದ ಪರಿಣಾಮ ಹೊಸಬೆಟ್ಟು ಗ್ರಾಮದ ಮಾಸ್ತಿಕಟ್ಟೆ ಎಂಬಲ್ಲಿ ಶನಿವಾರ ಬಿಜೆಪಿ ಮುಖಂಡರೊಬ್ಬರೊಬ್ಬರ ಕೊಲೆ ಯತ್ನ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಹಾಗೂ ಬಿಜೆಪಿಯ 13 ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಎಪಿಎಂಸಿ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆ ಪೇಟೆಯಿಂದ ಹೊಸಬೆಟ್ಟು ಕಡೆಗೆ ಹೊರಟಿತ್ತು. ಹೊಸಬೆಟ್ಟು ಪಂಚಾಯತ್ ಕಚೇರಿ ತಲುಪುತ್ತಿದ್ದಾಗ ಕಲ್ಲಮುಂಡ್ಕೂರು ಕ್ಷೇತ್ರದಿಂದ ಕಾಂಗ್ರೆಸ್ಸಿನ ಚಂದ್ರಹಾಸ ಸನಿಲ್ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದ ವಲೇರಿಯನ್ ಕುಟಿನ್ಹಾ ಇರುವೈಲಿನಿಂದ ಮೂಡುಬಿದಿರೆಗೆ ಸ್ಕೂಟರ್‍ನಲ್ಲಿ ಬರುತಿದ್ದರು. ಆ ವೇಳೆ ಚಂದ್ರಹಾಸ ಸನಿಲ್ ಮತ್ತಿತರರು ಇನೋವಾ ಕಾರಿನಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆಸಿ ವಲೇರಿಯನ್ ಅವರನ್ನು ನೆಲಕ್ಕೆ ಬೀಳಿಸಿದ್ದರೆನ್ನಲಾಗಿದೆ. ನಂತರ ಅವರಿಗೆ ಕಾಲಿನಿಂದ ತುಳಿದು ಕೊಲೆಗೆ ಯತ್ನಿಸಿದ್ದಾರೆ ಎಂದು ವಲೇರಿಯನ್ ಮೂಡುಬಿದಿರೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗಾಯಾಳು ವಲೇರಿಯನ್ ಮೂಡುಬಿದಿರೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಆರೋಪಿಗಳಾದ ಚಂದ್ರಹಾಸ ಸನಿಲ್, ಚೇತನ್, ಜಯರಾಮ ಬಂಗೇರ, ದಯಾನಂದ, ಸಂತೋಷ್ ಶೆಟ್ಟಿ, ಸೂರಜ್, ಚೇತನ್ ಮಡಿವಾಳ, ದೀಪಕ್ ಅವರ ವಿರುದ್ಧ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ಏತನ್ಮಧ್ಯೆ ಘಟನೆಗೆ ಸಂಬಂಧಿಸಿ ಚಂದ್ರಹಾಸ್ ಸನಿಲ್ ಪ್ರತಿದೂರು ನೀಡಿದ್ದಾರೆ. “ನಾವು ಚುನಾವಣೆಯ ವಿಜಯೋತ್ಸವ ಆಚರಿಸುತ್ತಾ ಹೊಸಬೆಟ್ಟು ಪಂಚಾಯತ್ ಕಛೇರಿ ಬಳಿ ತಲುಪುತ್ತಿದ್ದಾಗ ಅಲ್ಲಿಗೆ ಬಂದಿದ್ದ ವಲೇರಿಯನ್ ಸಿಕ್ವೇರಾ ಮತ್ತು ಬಿಜೆಪಿಯ ಇತರ ಕಾರ್ಯಕರ್ತರು ನಮ್ಮ ಪಕ್ಷದ ವಿರುದ್ಧ ಘೋಷಣೆ ಕೂಗಿದ್ದಾರೆ. ಅದಕ್ಕೆ ನಾವು ಆಕ್ಷೇಪಿಸಿದಕ್ಕೆ ನನಗೆ ಹಾಗೂ ನನ್ನ ಕಾರು ಚಾಲಕನಿಗೆ ಹಲ್ಲೆ ನಡೆಸಿ ನಮಗೆ ಜೀವಬೆದರಿಕೆಯೊಡಿದ್ದಾರೆ” ಎಂದು ದೂರಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಚಂದ್ರಹಾಸ್ ಸನಿಲ್ ನೀಡಿದ ದೂರಿನಂತೆ ಪೊಲೀಸರು ಬಿಜೆಪಿಯ ಜಗದೀಶ್ ಅಧಿಕಾರಿ, ಉಮನಾಥ ಕೋಟ್ಯಾನ್, ಈಶ್ವರ ಕಟೀಲು, ಭರತ್ ಶೆಟ್ಟಿ, ಸಮಿತ್‍ರಾಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಚಂದ್ರಹಾಸ್ ಸನಿಲ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.