ತಂಡಗಳ ಜಟಾಪಟಿಯೊಂದಿಗೆ ನಡೆದ ಪಡುಬಿದ್ರೆ ಗ್ರಾಮಸಭೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಜಟಿಲ ಎರಡು ಸಮಸ್ಯೆಗಳಾದ ಬಾರ್ ಹಾಗೂ ಗ್ಯಾಸ್ ಗೋದಾಮು ತೆರವು ವಿಚಾರದಲ್ಲಿ ಎರಡು ತಂಡಗಳ ಭಿನ್ನಾ ಭಿüಪ್ರಾಯದಿಂದಾಗಿ ಅವಾಚ್ಯವಾಗಿ ನಿಂದಿಸಿಕೊಂಡಿದಲ್ಲದೆ ಹಲ್ಲೆಗೆ ಮುಂದಾಗುವ ಮಟ್ಟಿಗೆ ಹೋಗಿ, ಅಂತಿಮವಾಗಿ ಏಕಪಕ್ಷೀಯವಾಗಿ ನಿರ್ಧಾರಗಳು ಮಂಡನೆಯಾಗುವ ಮೂಲಕ ಪಡುಬಿದ್ರೆ ಗ್ರಾಮ ಸಭೆ ಅಂತ್ಯಗೊಂಡಿದೆ.

ಸುಮಾರು ಮೂರು ತಿಂಗಳ ಹಿಂದೆ ನಡೆದ ಗ್ರಾಮಸಭೆಯಲ್ಲಿ, ಸರ್ಕಾರಿ ಶಾಲಾ ಕಾಲೇಜು ಪಕ್ಕದಲ್ಲಿ ಆರಂಭಗೊಂಡ ಬಾರ್ ತೆರವುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದಾಗ ಗದ್ದಲ ನಡೆದು ಸಭೆ ಮುಟುಕುಗೊಳಿಸಲಾಗಿತ್ತು. ಅದರ ಮುಂದುವರಿದ ಗ್ರಾಮಸಭೆ ಬುಧವಾರ ಬಿಲ್ಲವರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಬಾರ್ ವಿಚಾರವಾಗಿ ಮತ್ತೆ ಗೊಂದಲ ನಡೆಯುವ ಎಲ್ಲಾ ಸಾಧ್ಯತೆಗಳು ಇತ್ತು. ಜನರು ಅದನ್ನೇ ನಿರೀಕ್ಷೆ ಮಾಡಿದ್ದರು ಕೂಡಾ. ಆದರೆ ಸಭೆ ಆರಂಭಗೊಳ್ಳುತ್ತಿದ್ದಂತೆ ಬಾರ್ ವಿರೋಧಿ ಗುಂಪಿಗೆ ಪರ್ಯಾಯವಾಗಿ ಮತ್ತೊಂದು ಗುಂಪು ಸಿದ್ಧ(ಮಾಡುವ)ವಾಗುವ ಮೂಲಕ, ಎರಡೂ ತಂಡಗಳ ಮಧ್ಯೆ ಜಟಾಪಟಿ ಆರಂಭಗೊಂಡಿದೆ. ಅದರ ಮಧ್ಯೆ ಪಾದೆಬೆಟ್ಟುವಿನಲ್ಲಿ ಕಾರ್ಯಾಚರಿಸುತ್ತಿರುವ ಗ್ಯಾಸ್ ಶೇಖರಣಾ ಘಟಕ ತೆರವುಗೊಳಿಸಲು ಒಂದು ತಂಡ ಆಗ್ರಹಿಸಿದ್ದು, ಮತ್ತೊಂದು ತಂಡ ಅದನ್ನು ವಿರೋಧಿಸಿದೆ. ನಾಜೂಕಾಗಿ ಪರಿಹಾರ ಮಾಡಬೇಕಾಗಿದ್ದ ಸಮಸ್ಯೆಯನ್ನು ಜಟಿಲವಾಗಿಸಿರುವುದು ಗ್ರಾ ಪಂ ಉಪಾಧ್ಯಕ್ಷರು ಎಂಬ ಆರೋಪ ಗ್ರಾಮಸ್ಥರದ್ದು. ಒಂದು ಕಾಲೊನಿಯ ಸಮಸ್ಯೆಯನ್ನು ಅದೇ ಕಾಲೊನಿ ಜನರ ಅಭಿಪ್ರಾಯ ಕೇಳಿ ನಿರ್ಧರಿಸಬೇಕಾಗಿದ್ದರೂ, ಅಧಿಕಾರ ದುರುಪಯೋಗ ಪಡಿಸಿಕೊಂಡ ಅವರು ಇಡೀ ಗ್ರಾಮದ ಜನರ ಅಭಿಪ್ರಾಯ ಕೇಳಿ ಗ್ಯಾಸ್ ಶೇಖರಣಾ ಘಟಕಕ್ಕೆ ಬೆಂಬಲ ವ್ಯಕ್ತಪಡಿಸುವ ಮೂಲಕ ಸಭೆಯ ನಿರ್ಧಾರ ಏಕಪಕ್ಷೀಯವಾಗಿ ನಡೆಯುವಂತಾಯಿತು ಎಂಬ ಆರೋಪ ಗ್ರಾಮಸ್ಥರದ್ದು.

ವೈದ್ಯಾಧಿಕಾರಿಗೆ ತರಾಟೆ ಹುಚ್ಚು ನಾಯಿ ಕಡಿತಕ್ಕೂಳಗಾದ ಮಹಿಳೆಯೊಬ್ಬರು ಚಿಕಿತ್ಸೆಗಾಗಿ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಬಿ ಬಿ ರಾವ್ ಎಂಬವರಲ್ಲಿಗೆ ಬಂದಾಗ, ಕೇವಲ ಮದ್ದು ನೀಡಿ ನಾಳೆ ಬಂದು ಚುಚ್ಚುಮದ್ದು ಪಡೆಯಿರಿ ಎಂಬುದಾಗಿ ನಿರ್ಲಕ್ಷ್ಯ ತೋರಿಸಿದ್ದಾರೆ ಎಂಬುದಾಗಿ ಆರೋಪಿಸಿದ ಗ್ರಾಮಸ್ಥರು, ಅವರ ಪ್ರಾಣಕ್ಕೇನಾದರೂ ಅಪಾಯ ಸಂಭವಿಸಿದೆ ಯಾರು ಹೊಣೆ ಎಂಬುದಾಗಿ ವೈದ್ಯರನ್ನು ತರಾಟೆಗೆ ತೆದುಕೊಂಡರು.