ನಗರದಲ್ಲಿ ಶೀಘ್ರ 11 ಬಸ್ ಬೇ ನಿರ್ಮಾಣ

ವಾಹನಗಳ ಸುಗಮ ಸಂಚಾರಕ್ಕೆ ಪೂರಕ

ಮಂಗಳೂರು : ನಗರದಲ್ಲಂತೂ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ದಟ್ಟವಾಗತೊಡಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸಿದರೂ ಸಾಧ್ಯವಾಗುತ್ತಿಲ್ಲ. ಇನ್ನು ಸೆಖೆಗಾಲದ ಈ ಸಂದರ್ಭದಲ್ಲಂತೂ ಟ್ರಾಫಿಕ್ ಪೊಲೀಸರು ಸಂಚಾರ ಸರಾಗಗೊಳಿಸಲು ಹರಸಾಹಸಪಡುತ್ತಿದ್ದಾರೆ. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲೆಂದೇ ನಗರದ 11 ಕಡೆಗಳಲ್ಲಿ ಸುಸಜ್ಜಿತ ಬಸ್ ಬೇ ನಿರ್ಮಿಸಲು ಮಹಾನಗರ ಪಾಲಿಕೆ ಉದ್ದೇಶಿಸಿದ್ದು ಸಮೀಕ್ಷೆಯನ್ನೂ ಪೂರ್ಣಗೊಳಿಸಿದೆ.

ಬಲ್ಲಾಳಭಾಗ್, ಕೆನರಾ ಕಾಲೇಜು ಸಮೀಪ, ಪಿವಿಎಸ್, ಬಂಟ್ಸ್‍ಹಾಸ್ಟೆಲ್, ಜ್ಯೋತಿ, ಬಲ್ಮಠ, ಬೆಂದೂರ್‍ವೆಲ್, ಕಂಕನಾಡಿ, ಆ್ಯಗ್ನೆಸ್, ಶಿವಭಾಗ್, ನಂತೂರು ಹೀಗೆ ನಗರದ ಪ್ರಮುಖ 11 ಕಡೆಗಳಲ್ಲಿ ಬಸ್ ಬೇ ನಿರ್ಮಿಸಲು ಸ್ಥಳ ಸಮೀಕ್ಷೆ ನಡೆಸಲಾಗಿದೆ.

ಖಾಸಗಿ ಭೂಮಿ ಇದ್ದರೆ ಅಲ್ಲಿ ಮಾತುಕತೆ ನಡೆಸಿ ಇಕ್ಕಟ್ಟಾಗುವ ಸ್ಥಳದಲ್ಲಿ ಅಗತ್ಯಕ್ಕೆ ತಕ್ಕಂತೆ ಬಸ್ ಬೇ ನಿರ್ಮಿಸಲಾಗುತ್ತದೆ. ಬಲ್ಲಾಳಬಾಗ್ ಬಳಿ ಮರವನ್ನು ಉಳಿಸಿಕೊಂಡು ಬಸ್ ಬೇ ನಿರ್ಮಾಣ, ಪಿವಿಎಸ್-ಬಂಟ್ಸ್ ಹಾಸ್ಟೆಲ್ ರಸ್ತೆಯಲ್ಲಿರುವ ಬಸ್ ನಿಲ್ದಾಣವನ್ನು ರಿಕ್ಷಾ ಪಾರ್ಕ್ ಬಳಿ ತರುವುದು, ಬಂಟ್ಸ್ ಹಾಸ್ಟೆಲ್ ಈಗಿನ ನಿಲ್ದಾಣಕ್ಕಿಂತ ಮೊದಲು ಹೊಸ ಬಸ್ ಬೇ ನಿರ್ಮಿಸುವುದು ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲು ಚರ್ಚಿಸಲಾಗಿದೆ.

ಬಸ್ ಬೇ ಜೊತೆಗೆ ಬಸ್ ಶೆಲ್ಟರ್, ಕುಡಿಯುವ ನೀರು, ಶೌಚಾಲಯ ಸಹಿತ ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತದೆ. ಅಲ್ಲದೆ ನಗರದಲ್ಲಿ ಅವೈಜ್ಞಾನಿಕ ಬಸ್ ನಿಲ್ದಾಣಗಳನ್ನು ತೆರವುಗೊಳಿಸಲಾ ಗುವುದು. ನಗರದಲ್ಲಿ ಇದೀಗ ಇರುವ ಏಕೈಕ ಬಸ್ ಬೇ ಎಂದರೆ ಬಾವುಟ ಗುಡ್ಡ. ಇಲ್ಲಿ ಮುಖ್ಯ ರಸ್ತೆಯ ಪಕ್ಕ ಅರ್ಧವೃತ್ತಾಕಾರದಲ್ಲಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆಕರ್ಷಕ ಶೈಲಿಯಲ್ಲಿದೆ. ಬಸ್ಸುಗಳು ಬಸ್ ಬೇ ಒಳಗೆ ಬಂದು ಹೋಗಬೇಕೆಂಬುದು ಪಾಲಿಕೆ ನಿಯಮ. ಆದರೆ ವಿಪರ್ಯಾಸವೆಂದರೆ ಬಹುತೇಕ ಬಸ್‍ಗಳು ಮಾರ್ಗದಲ್ಲೇ ಜನರನ್ನು ಹತ್ತಿಸಿಕೊಂಡು ಹೋಗುತ್ತಿವೆ.

 ಏನಿದು ಬಸ್ ಬೇ ?

 ಬಸ್ಸುಗಳು ಸಂಚರಿಸುವ ಮುಖ್ಯರಸ್ತೆಗಿಂತ ಕೊಂಚ ಒಳಭಾಗಕ್ಕೆ ರಸ್ತೆಯನ್ನು ಅರ್ಧವೃತ್ತಾಕಾರಕ್ಕೆ ವಿಸ್ತರಿಸಿ ಅಲ್ಲಿ ಬಸ್ಸು ನಿಲುಗಡೆಗೊಳಿಸಲು ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ ಇಲ್ಲಿ ಬಸ್ಸು ನಿಲ್ದಾಣ, ಪ್ರಯಾಣಿಕರಿಗೆ ಕುಳಿತುಕೊಳ್ಳಲು ತಂಗುದಾಣ, ಕುಡಿಯುವ ನೀರು, ಶೌಚಾಲಯ ಇತ್ಯಾದಿ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಬಸ್ ನಿಲ್ಲಿಸಿದರೆ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಇಲ್ಲ. ಈ ಜಾಗಕ್ಕೆ ಕಾಂಕ್ರೀಟು ಹಾಕುವುದು ಸೇರಿದಂತೆ ಇತರ ಕೆಲಸಗಳನ್ನು ಮಾಡಲಾಗುತ್ತದೆ.