ನಗದುರಹಿತ ವ್ಯವಹಾರದಲ್ಲಿ ಒಂದು ಸಾವಿರ ರೂ ಗೆದ್ದ ಮಂಗಳೂರು ನಿವಾಸಿ

ನನ್ನ ಪ್ರತಿನಿಧಿ ವರದಿ
ಮಂಗಳೂರು : ನಗದುರಹಿತ ವ್ಯವಹಾರದಲ್ಲಿ ಮಂಗಳೂರಿನ ನಿವಾಸಿ ವಿಶ್ವನಾಥ ಪ್ರಭು ಒಂದು ಸಾವಿರ ರೂಪಾಯಿ ಗೆದ್ದಿದ್ದಾರೆ. ಹೌದು, ವಿಶ್ವನಾಥ ಪ್ರಭು ನಿಟಿ ಆಯೋಗದ `ಕ್ರಿಸ್ಮಸ್ ಗಿಫ್ಟ್ ಟು ದಿ ನ್ಯಾಷನ್’ ಯೋಜನೆಯಲ್ಲಿ ಈ ಉಡುಗೊರೆಯನ್ನು ಪಡೆದಿದ್ದಾರೆ.
ನೋಟು ಅಮಾನ್ಯದ ಬಳಿಕ ಸರ್ಕಾರದ ನಗದುರಹಿತ ಆರ್ಥಿಕತೆಯನ್ನು ಉತ್ತೇಜಿಸಲು ನಿಟಿ ಆಯೋಗ ನಗದು ಬಹುಮಾನಗಳನ್ನು ಘೋಷಿಸಿದೆ. ಈ ಯೋಜನೆಯಲ್ಲಿ ಗ್ರಾಹಕರಿಗಾಗಿ ಇರುವ ಯೋಜನೆಯನ್ನು `ಲಕ್ಕಿ ಗ್ರಾಹಕ ಯೋಜನೆ’ ಮತ್ತು ವ್ಯಾಪಾರಿಗಳಿಗಾಗಿ `ಡಿಜಿ ಧನ್ ವ್ಯಾಪಾರ್ ಯೋಜನೆ’ ಎಂದು ಕರೆಯಲಾಗಿದೆ. ಈ ಯೋಜನೆಯನ್ನು ಡಿಸೆಂಬರ್ 25ರಂದು ಆರಂಭಿಸಲಾಗಿದೆ. ಈಗಾಗಲೇ ಯೋಜನೆಯಡಿಯಲ್ಲಿ ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಕೋಟ್ಯಂತರ ರೂ ಬಹುಮಾನ ವಿತರಿಸಲಾಗಿದೆ.
ಅದೃಷ್ಟವಂತ ಗ್ರಾಹಕರು ಮತ್ತು ವ್ಯಾಪಾರಿಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುವುದು. ವಿಶ್ವನಾಥರು ಕೆಎಂಸಿ ಫಾರ್ಮಸಿಗೆ ಡಿಸೆಂಬರ್ 31ರಂದು ಹೋದಾಗ ರೂ 1000 ಮೌಲ್ಯದ ಔಷಧಿಗಳನ್ನು ರೂಪೇ ಕಾರ್ಡು ಮುಖಾಂತರ ಖರೀದಿಸಿದ್ದರು. ಜನವರಿ 2ರಂದು ಅವರ ಬ್ಯಾಂಕ್ ಖಾತೆಯಲ್ಲಿ ರೂ 1000 ಸೇರ್ಪಡೆಯಾಗಿರುವ ಸಂದೇಶವೊಂದು ಬಂದಿತ್ತು. ಜೊತೆಗೆ ವಿಶ್ವನಾಥ ಪ್ರಭು ಲಕ್ಕಿ ಗ್ರಾಹಕ ಯೋಜನೆಯ ವಿಜೇತರಾಗಿದ್ದಾರೆ ಎಂದು ಸಂದೇಶದಲ್ಲಿ ವಿವರಿಸಿತ್ತು.