ನಗರದಲ್ಲಿ ಕಾಡಲು ಶುರುವಾಗಿದೆ ಕುಡಿಯುವ ನೀರಿನ ಸಮಸ್ಯೆ

ಸಾಂದರ್ಭಿಕ ಚಿತ್ರ

ಬರುತ್ತಿದೆ ಸಹಾಯವಾಣಿಗೆ ದಿನನಿತ್ಯ ಕರೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಹಾನಗರ ಪಾಲಿಕೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ರೇಶನಿಂಗ್ ಸಿಸ್ಟಂ ಪ್ರಾರಂಭಿಸಿದ ಬಳಿಕ ನೀರಿನ ಸಮಸ್ಯೆ ಅಷ್ಟೊಂದು ಬಿಗಡಾಯಿಸದಿದ್ದರೂ ಒಂದೊಂದಾಗಿ ಸಮಸ್ಯೆಗಳು ಇದೀಗ ಹೊರಬರತೊಡಗಿದೆ.

ಮನಪಾ ನಿರಂತರ ನೀರು ಪೂರೈಕೆ ಮಾಡುತ್ತಿದ್ದೆ ಎಂದು ಮೇಯರ್, ಅಧಿಕಾರಿಗಳು ಸಮರ್ಥನೆ ಮಾಡಿಕೊಳ್ಳುತ್ತಾ ಇದ್ದರೂ ನೀರಿನ ಸಮಸ್ಯೆ ಮಾತ್ರ ಬಿಗಡಾಯಿಸತೊಡಗಿದೆ. ಕೆಲವು ಕಡೆಗಳಲ್ಲಿ ಜನತೆ ಇನ್ನೂ ಖಾಸಗಿ ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತಿದ್ದಾರೆ.

ಜಿಲ್ಲಾಧಿಕಾರಿ ಜಗದೀಶ್ ಅವರು ಇತ್ತೀಚೆಗೆ ನಡೆದ ಜಿ ಪಂ ಕೆಡಿಪಿ ಸಭೆಯಲ್ಲಿ  ನೀರಿನ ಸಮಸ್ಯೆ ಆಗದಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದರು. ಈ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೂಡಾ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ  ಅದಕ್ಕೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೇ ಹೊಣೆ ಎಂದು ಹೇಳಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯಾದಲ್ಲಿ ದೂರು ನೀಡಿ ಎಂದು ಮನಪಾ ಸಹಾಯವಾಣಿ ಆರಂಭಿಸಿದೆ. ಆದರೆ ಪಾಂಡೇಶ್ವರ, ರೊಸಾರಿಯೋ ಪರಿಸರದಲ್ಲಿ ಕುಡಿಯುವ ನೀರಿಲ್ಲ ಎಂದು ಹಿರಿಯ ನಾಗರಿಕರು ಸಹಾಯವಾಣಿಗೆ ಈಗಾಗಲೇ ಕರೆ ಮಾಡಿದ್ದಾರೆ. ಪಾಂಡೇಶ್ವರ, ರೊಸಾರಿಯೋ ರಸ್ತೆ, ಹೊಯ್ಗೆ ಬಜಾರ್ ರಸ್ತೆ, ಗೂಡ್ಸ್ ಶೆಡ್, ಕೋಝಿ ಕಾರ್ನರ್, ಪಾಂಡೇಶ್ವರ ಕಟ್ಟೆ,  ಕಂದುಕ, ಬದ್ರಿಯಾ ಕಾಲೇಜು ಜಂಕ್ಷನ್, ರೊಜಾರಿಯೋ ಚರ್ಚ್, ನೀರೇಶ್ವಾಲ್ಯ, ಎ ಬಿ ಶೆಟ್ಟಿ ವೃತ್ತದ ಸಮೀಪ ಸಹಿತ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದೆ.

“ನಮಗೆ ಸ್ಪಲ್ವ ಪ್ರಮಾಣದ ನೀರನ್ನಾದರೂ ಒದಗಿಸಿ” ಎಂದು ಜನರು ಪಾಲಿಕೆ ವ್ಯಾಪ್ತಿಯ ಜನರು ಗೋಗರೆಯುತ್ತಿದ್ದಾರೆ. ಮಕ್ಕಳ ರಜಾ ಅವಧಿ ಬೇರೆ ಇರುವುದರಿಂದ ನೀರಿನ ಬಳಕೆ ಹೆಚ್ಚಾಗಿದೆ. ಮಹಿಳಾ ಮೇಯರ್, ಕಾರ್ಪೋರೇಟರ್‍ಗಳಾದರೂ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎನ್ನುತ್ತಾರೆ ಪಾಂಡೇಶ್ವರದ ಗೃಹಿಣಿ ಮಮತಾ.