ಕನಿಷ್ಠವೇತನ ಒತ್ತಾಯಿಸಿ ಪ್ರತಿಭಟನೆ

ಮಣಿಪಾಲ ಡೀಸಿ ಕಚೇರಿ ಎದುರು ಪ್ರತಿಭಟನೆ ನಡೆಸಿರುವುದು

ನಮ್ಮ ಪ್ರತಿನಿಧಿ ವರದಿ

ಉಡುಪಿ : ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರು ಸೇರಿದಂತೆ ಸ್ಕಿಮ್ ನೌಕರರು ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಅಧ್ಯಕ್ಷ ವಿಶ್ವನಾಥ ರೈ, “ಉದ್ಯೋಗ ಖಾತ್ರಿ ಇತ್ಯಾದಿ ಯೋಜನೆಗಳನ್ನು ಬಲಿಷ್ಠ ಪಡಿಸಬೇಕು. ಯೋಜನೆಗಳಿಗೆ ಕಡಿತವಾಗಿರುವ 3 ಕೋಟಿ ರೂಪಾಯಿ ಅನುದಾನವನ್ನು ವಾಪಾಸು ನೀಡಬೇಕು. 45-46ನೇ ಎಲ್ ಐ ಸಿ ಶಿಫಾರಸ್ಸಿನಂತೆ ನೌಕರರೆಂದು ಪರಿಗಣಿಸಿ ಕನಿಷ್ಠವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಡಬೇಕು. ಈ ಎಲ್ಲ ಯೋಜನೆಗಳನ್ನು ಖಾಯಂ ಮಾಡಿ ಈ ಯೋಜನೆಗಳ ಫಲಾನುಭವಿಗಳನ್ನು ಉಳಿಸಬೇಕು” ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಸುಶೀಲ ನಾಡ ಮಾತನಾಡಿ, “ಅಂಗನವಾಡಿ ನೌಕರರನ್ನು ಕನಿಷ್ಠ ಕೂಲಿ ಕಾಯಿದೆಯೊಳಗೆ ಸೇರಿಸಿ ಕನಿಷ್ಠಿ ಕೂಲಿ ಜಾರಿಗೊಳಿಸಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ಕನಿಷ್ಠ ಕೂಲಿ 18 ಸಾವಿರ ರೂ ನೀಡಬೇಕು. ಅಂಗನವಾಡಿ ನೌಕರರನ್ನು ಸರಕಾರದ ಮೂರು ಮತ್ತು ನಾಲ್ಕನೆ ದರ್ಜೆ ನೌಕರರನ್ನಾಗಿ ಪರಿಗಣಿಸಿ ಖಾಯಂಗೊಳಿಸಬೇಕು. ಮೇಲ್ವಿಚಾರಕಿ ಹುದ್ದೆ ಶೇಕಡಾ 100ರಷ್ಟು ಅಂಗನವಾಡಿ ನೌಕರರಿಗೆ ನೀಡಬೇಕು. ವಯಸ್ಸಿನ ಮಾನದಂಡ ಲಿಖಿತ ಪರೀಕ್ಷೆಗಳನ್ನು ನಡೆಸದೆ ಸೇವಾ ಜೇಷ್ಠತೆ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಬೇಕು. ನೌಕರರಿಗೆ ಪ್ರಮುಖ ಶಸ್ತ್ರ ಚಿಕಿತ್ಸೆಗಳಾಗುವಾಗ ಒಂದು ಲಕ್ಷ ರೂ ಪರಿಹಾರ ವೇತನ ಸಹಿತ ರಜಾ ಸೌಲಭ್ಯ ನೀಡಬೇಕು. ಗ್ರಾಚ್ಯೂಟಿ, ಪಿಂಚಣಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು. ಅಂಗನವಾಡಿ ಕೇಂದ್ರಗಳಿಗೂ ಎರಡು ತಿಂಗಳ ಬೇಸಿಗೆ ರಜಾ ಸೌಲಭ್ಯವನ್ನು ನೀಡಬೇಕು. ನೌಕರರಿಂದ ಇಲಾಖೇತರ ಕೆಲಸಗಳನ್ನು ಮಾಡಿಸಬಾರದು. ಬೀದರ್ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದವರು ಒತ್ತಾಯಿಸಿದ್ದಾರೆ.

ಬಳಿಕ ಪ್ರತಿಭಟನಾನಿರತರು ಮನವಿಯನ್ನು ಅಪರ ಜಿಲ್ಲಾಧಿಕಾರಿ ಅನುರಾಧಗೆ ಸಲ್ಲಿಸಿದರು.