ವಿವಿಧ ಬೇಡಿಕೆ ಆಗ್ರಹಿಸಿ ಕುಂದಾಪುರ ಪಂಚಾಯತ್ ಎದುರು ಸಿಐಟಿಯು ಧರಣಿ

ತಾಲೂಕು ಪಂಚಾಯಿತಿ ಎದುರು ಸೇರಿದ ಅಂಗನವಾಡಿ ಕಾರ್ಯಕರ್ತರು

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆ ನೌÀಕರರ ಸಂಘ, ಅಂಗನವಾಡಿ ನೌಕರರ ಸಂಘ, ಅಕ್ಷರ ದಾಸೋಹ ಕಾರ್ಮಿಕರ ಸಂಘ ಹೀಗೇ ಕಾರ್ಮಿಕರ ವರ್ಗ ಸಂಘಟನೆ ಇಂದು ರಾಜ್ಯದಾದ್ಯಂತ ಹಮ್ಮಿಕೊಂಡ ಪ್ರತಿಭಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕುಂದಾಪುರ ತಾಲೂಕು ಪಂಚಾಯಿತಿ ಕಚೇರಿ ಮುಂದೆಯೂ ಪ್ರತಿಭಟನೆ ನಡೆಯಿತು.

ಅಂಗನವಾಡಿ ನೌಕರರನ್ನು ಕನಿಷ್ಟ ಕೂಲಿ ಕಾಯ್ದೆಯೊಳಗೆ ಸೇರಿಸಿ ಕನಿಷ್ಟ ಕೂಲಿ ಜಾರಿಗೊಳಿಸಬೇಕು, ಸೇವಾ ಜ್ಯೇಷ್ಟತೆ ಆಧಾರದಲ್ಲಿ ಕನಿಷ್ಟ ಕೂಲಿ ಹದಿನೆಂಟು ಸಾವಿರ ರೂ ನೀಡಬೇಕು, ಮೂರು ಮತ್ತು ನಾಲ್ಕನೇ ದರ್ಜೆ ನೌಕರರನ್ನಾಗಿ ಗುರುತಿಸಬೇಕು, ಮೊದಲಾದ ಹನ್ನೊಂದು ಬೇಡಿಕೆಗಳನ್ನು ಮತ್ತು ಆಶಾ ಕಾರ್ಯಕರ್ತೆಯರ ಸಮಸ್ಯೆಗಳಾದ ಕಡಿತಗೊಳಿಸಿದ ಅನುದಾನವನ್ನು ಕೇಂದ್ರ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು, ಹತ್ತು ಸಾವಿರ ವೇತನ ನಿಗಧಿ ಮಾಡಬೇಕು ಮೊದಲಾದ 14 ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಕೂಗು ದಿನೇ ದಿನೇ ಹೆಚ್ಚುತ್ತಿದೆ. ಒಂದಲ್ಲಾ ಒಂದು ವರ್ಗದ ದುಡಿಯುವ ಕಾರ್ಮಿಕರು ಸಂಘಟಿತರಾಗಿ ಹೋರಾಟಕ್ಕೆ ಮುನ್ನುಡಿಯಿಡುತ್ತಿದ್ದಾರೆ. ಆದರೆ ಅಧಿಕಾರಿಗಳು, ಸರ್ಕಾರ ಮಾತ್ರ ನಿದ್ದೆಗಣ್ಣಿನಿಂದ ಎಚ್ಚೆತ್ತಿಲ್ಲ. ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಹಾಗೂ ಇಲಾಖೆಗಳು ಸ್ಪಂದನೆ ನೀಡುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.