ಸಿಐಟಿಯು ಜಾಗೃತಿ ಜಾಥಾ ಮಂಗಳೂರಿಗೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ರಾಜ್ಯವ್ಯಾಪಿ ಕಾರ್ಮಿಕರಿಗೆ ಕನಿಷ್ಟ ರೂ 18,000 ಸಮಾನ ವೇತನ ನೀಡಬೇಕು, ಅಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯನಿಧಿ ಮತ್ತು ಸ್ಮಾರ್ಟ್ ಕಾರ್ಡ್ ಯೋಜನೆ ಜಾರಿಗೊಳಿಸಬೇಕು, ಬೆಲೆಯೇರಿಕೆ ನಿಯಂತ್ರಣ ಮಾಡುವುದಲ್ಲದೆ ಸಾರ್ವತ್ರಿಕ ರೇಷನ್ ವ್ಯವಸ್ಥೆ ಬಲಪಡಿಸಬೇಕು, ಗುತ್ತಿಗೆ ಪದ್ಧತಿ ನಿಯಂತ್ರಿಸುವುದಲ್ಲದೆ ಖಾಯಂಯೇತರ ಕಾರ್ಮಿಕರ ಖಾಯಮಾತಿಗೆ ಶಾಸನ ತರಬೇಕು, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಕೂಡದು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಲ್ಲದೆ ಕಾರ್ಮಿಕರ ಹಕ್ಕುಗಳ ರಕ್ಷಣೆ ಮಾಡಬೇಕು” ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಕಳೆದ ಜುಲೈ 29ರಿಂದ ರಾಜ್ಯಾದ್ಯಂತ ಸಾಗುತ್ತಿರುವ ಜಾಗೃತಿ ಜಾಥಾ ಆಗಸ್ಟ್ 12ರಂದು ಮಂಗಳೂರಿಗೆ ಆಗಮಿಸಿದಾಗ ದ ಕ ಜಿಲ್ಲೆಯ ಸಿಐಟಿಯು ಸಂಯೋಜಿತ ಕಾರ್ಮಿಕ ಸಂಘಟನೆಯ ಸದಸ್ಯರು ಸ್ವಾಗತಿಸಿದರು. ಜಿಲ್ಲಾಧಿಕಾರಿ ಕಚೇರಿಯೆದುರು ಸಭೆ ಏರ್ಪಡಿಸಲಾಗಿತ್ತು.

ಸಿಐಟಿಯು ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, “ಇಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರ ಜನರಿಗೆ ಸಂಪೂರ್ಣ ನೆಮ್ಮದಿ ಇದೆ ಎಂಬುದಾಗಿ ಪ್ರಚಾರ ಮಾಡುತ್ತಿದೆ. ಆದರೆ ನಿಜವಾಗಿ ಜನರು ತೀವ್ರ ಕಷ್ಟವನ್ನೇ ಎದುರಿಸುತ್ತಿದ್ದಾರೆ. ಪ್ರಧಾನಿ ಮೋದಿಯವರು ಹಲವಾರು ವಿದೇಶಗಳಿಗೆ ಹೋಗಿ ಬಂದರೂ, ಅವರು ಮಾಡಿರುವುದು ವಿದೇಶದ ಖಾಸಗಿ ಉದ್ಯಮಿಗಳಿಗೆ ನಮ್ಮ ದೇಶದ ಉದ್ಯಮಗಳನ್ನು ಅಗ್ಗದ ಬೆಲೆಗೆ ನೀಡಿದ್ದು. ತಾವು ದೇಶಭಕ್ತರು ಎಂದು ಬಿಂಬಿಸುತ್ತಿರುವ ಕೇಂದ್ರ ಸರಕಾರ, ರಕ್ಷಣಾ ಉದ್ಯಮದ ಸುಮಾರು ರೂ 1 ಲಕ್ಷ ಕೋಟಿಗಿಂತಲೂ ಅಧಿಕ ಮೌಲ್ಯದ ಬಿಇಎಂಎಲ್ ಸಂಸ್ಥೆಯನ್ನು ಜುಜುಬಿ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸುತ್ತಿದೆ. ಯಾವ ಮುಸ್ಲಿಮರ ಬಗ್ಗೆ ದ್ವೇಷದ ಭಾವನೆಯನ್ನು ಬಿಂಬಿಸಲಾಗುತ್ತಿದೆಯೋ ಆ ಮುಸ್ಲಿಂ ದೇಶಗಳಿಂದ ಅಗ್ಗದ ಬೆಲೆಗೆ ಖರೀದಿಸಿದ ಕಚ್ಚಾ ತೈಲವನ್ನು ಪರಿಷ್ಕರಿಸಿ ವಿಪರೀತ ಬೆಲೆ ನಿಗದಿಗೊಳಿಸಿ, ದೇಶದ ಅಂಬಾನಿ, ಅದಾನಿ ಮೊದಲಾದ ಮಧ್ಯವರ್ತಿ ಉದ್ಯಮಿಗಳಿಗೆ ಹೇರಳ ಲಾಭ ಮಾಡಿಕೊಡಲಾಗುತ್ತಿದೆ. ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಗ್ರಾಹಕರಿಗೆ ಕಡಿತಗೊಳಿಸುತ್ತಾ ಇನ್ನೊಂದೆಡೆ ಪ್ರತಿ ತಿಂಗಳೂ ಅದರ ಬೆಲೆಯನ್ನು ಏರಿಸುತ್ತಾ ಹೋಗುತ್ತಿದೆ. ನೋಟು ಅಮಾನ್ಯೀಕರಣದ ಬಳಿಕದ ಏಳು ತಿಂಗಳುಗಳಲ್ಲಿ ಜನಸಾಮಾನ್ಯರಿಗೆ ಒಂದೆಡೆ ತೊಂದರೆಯಾದರೆ ಇನ್ನೊಂದೆಡೆ ದೇಶದ ಕೆಲವೇ ಉದ್ಯಮಿಗಳ ಸಂಪತ್ತು ರೂ 3.5 ಲಕ್ಷ ಕೋಟಿಯಷ್ಟು ಏರಿಕೆಯಾಗಿದೆ. ಇಡೀ ದೇಶಕ್ಕೆ ಏಕರೀತಿಯ ತೆರಿಗೆ ಎಂದು ಜಿಎಸ್ಟಿಯನ್ನು ಇತ್ತೀಚೆಗೆ ಜಾರಿ ಮಾಡಲಾಯಿತು. ಅದರಲ್ಲಿ ಮಹಿಳೆಯರ ಸ್ವಚ್ಛತಾ ಪ್ಯಾಡುಗಳಿಗೆ ಶೇ 18 ತೆರಿಗೆ ವಿಧಿಸಿದರೆ ಚಿನ್ನಕ್ಕೆ ಶೇ 3 ತೆರಿಗೆ ವಿಧಿಸಿದ್ದು ಯಾರ ಹಿತಕ್ಕಾಗಿ ಎಂಬ ಪ್ರಶ್ನೆ ಏಳುತ್ತದೆ” ಎಂದು ಮೀನಾಕ್ಷಿ ಸುಂದರಂ ವಿವರಿಸಿದರು.