ಮುಲ್ಕಿ ಬಸ್ ನಿಲ್ದಾಣ ಅಭಿವೃದ್ಧಿಗೆ ಸ್ಥಳೀಯ ನಾಗರಿಕರ ಒತ್ತಾಯ

ಮುಲ್ಕಿ ನಿಲ್ದಾಣದಲ್ಲಿ ಬೇಕಾಬಿಟ್ಟಿ ವಾಹನ ನಿಲ್ಲಿಸಿರುವುದು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿನ ಬಸ್ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿದ್ದು, ಬಸ್ಸುಗಳು ನಿಲ್ಲಲು ಸೂಕ್ತ ಸ್ಥಳಾವಾಕಾಶದ ಕೊರತೆ ಎದ್ದು ಕಾಣುತ್ತಿದೆ. ನಿಲ್ದಾಣದಲ್ಲಿ ಕಿನ್ನಿಗೋಳಿ ಕಡೆಗೆ ಹೋಗುವ ಬಸ್ಸುಗಳು ನಿಲ್ಲಲು ನಿಯಮವಿದ್ದರೂ ಬಸ್ಸುಗಳು ಪಾಲಿಸುತ್ತಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಕೆಲ ತಿಂಗಳುಗಳಿಂದ ಮುಲ್ಕಿ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಸರ್ವೀಸ್ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದು, ಇದರಿಂದಾಗಿ ನಿಲ್ದಾಣದ ಅಬಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಸರ್ವೀಸ್ ರಸ್ತೆ ಕಾಮಗಾರಿಗೆ ಮುಲ್ಕಿಯ ಉದ್ಯಮಿಗಳು ಅಡ್ಡಗಾಲಿಟ್ಟು ಕಾಮಗಾರಿ ಸ್ಥಗಿತಗೊಂಡಿದೆ. ಒಂದೆಡೆ ಮುಲ್ಕಿ ಹೆದ್ದಾರಿ ಅಬಿವೃದ್ಧಿಯಾಗಬೇಕೆಂದು ಬಾಷಣ ಬಿಗಿಯುತ್ತಿರುವ ಉದ್ಯಮಿಗಳು ಸಂಸದರ ಜೊತೆ ಲಾಬಿ ಮಾಡಿಕೊಂಡು ಸರ್ವೀಸ್ ರಸ್ತೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸರ್ವೀಸ್ ರಸ್ತೆ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಮುಲ್ಕಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ಸಹಿತ ಸರ್ವೀಸ್ ಬಸ್ಸುಗಳು ಎರ್ರಾಬಿರ್ರಿಯಾಗಿ ನಿಲ್ಲಿಸುತ್ತಿರುವುದರಿಂದ ನಿಲ್ದಾಣದಲ್ಲಿ ಪ್ರಯಾಣಿಕರು ಧೂಳಿನಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ನಿಲ್ಲಬೇಕಾದ ಪರಿಸ್ಥಿತಿ ಇದೆ.

ಅಪಘಾತವಲಯ ಮುಲ್ಕಿ ಹೆದ್ದಾರಿ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಿಧಾನದಿಂದ ಮುಲ್ಕಿ ಬಿಲ್ಲವ ಸಂಘದ ಬಳಿಯಿಂದ ಬಪ್ಪನಾಡಿನವರೆಗೆ ಹೆದ್ದಾರಿ ಮೃತ್ಯುಕೂಪವಾಗಿ ಪರಿಣಮಿಸಿದ್ದು, ಅನೇಕ ಅಪಘಾತಗಳು ಸಂಭವಿಸಿ ಅನೇಕ ಅಮಾಯಕರು ಜೀವಕಳೆದುಕೊಂಡಿದ್ದಾರೆ. ಮುಲ್ಕಿ  ನಿಲ್ದಾಣ ಬಳಿಯ ಜಂಕ್ಷನಿನಲ್ಲಿ ಹೆದ್ದಾರಿ ಕ್ರಾಸ್ ಮಾಡಲು ಪಾದಚಾರಿಗಳು ಭಯಪಡುತ್ತಿದ್ದಾರೆ. ಮುಲ್ಕಿಗೆ ನೂತನ ನಿಲ್ದಾಣದ ಭರವಸೆ ನೀಡಿರುವ ಶಾಸಕ ಅಭಯಚಂದ್ರರಿಗೆ ಯೋಜನೆ ಅನುಷ್ಠಾನಗೊಳಿಸಲು ಪರುಸೊತ್ತೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಕೂಡಲೇ ಮುಲ್ಕಿ ಹೆದ್ದಾರಿಗೆ ಸರ್ವೀಸ್ ರಸ್ತೆಯ ಕಾರ್ಯಕಲ್ಪ ಒದಗಿಸಿ ಮುಲ್ಕಿ ನಿಲ್ದಾಣವನ್ನು ಅಬಿವೃದ್ಧಿ ಪಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.