ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ನಾಗರಿಕರಿಂದ ಮೆರವಣಿಗೆ

ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರಮುಖರು ಮಾತನಾಡಿರುವುದು

ನಮ್ಮ ಪ್ರತಿನಿಧಿ ವರದಿ

ಶಿರಸಿ : ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ಶಿರಸಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ವಿವಿಧ ಸಂಘಟನೆ ಪ್ರಮುಖರ ಸಹಿತ ನೂರಾರು ಜನರು ನಗರದಲ್ಲಿ ಮಂಗಳವಾರ ಮೆರವಣಿಗೆ ನಡೆಸಿದರು.

ಶಿರಸಿ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ನಗರಸಭಾ ಅಧ್ಯಕ್ಷ ಪ್ರದೀಪ ಶೆಟ್ಟಿ, ಬಿಜೆಪಿ ನಗರ ಅಧ್ಯಕ್ಷ ಗಣಪತಿ ನಾಯ್ಕ, ತಾ ಪಂ ಉಪಾಧ್ಯಕ್ಷ ಚಂದ್ರು ದೇವಾಡಿಗ, ಇತರ ಪ್ರಮುಖರು, ನಗರಸಭಾ ಸದಸ್ಯರು, ರಿಕ್ಷಾ ಸಂಘಟನೆಗಳ ಸದಸ್ಯರು, ನಾಗರಿಕರು, ಹೋರಾಟ ಸಮಿತಿ ಪ್ರಮುಖರಾದ ಉಪೇಂದ್ರ ಪೈ, ಎಂ ಎಂ ಭಟ್, ಮಂಜು ಮೊಗೇರ, ಪ್ರಕಾಶ ಭಾಗ್ವತ, ಸಿದ್ದಾಪುರದ ಹೋರಾಟ ಸಮಿತಿ ಪ್ರಮುಖರು ಮಾರಿಗುಡಿಯಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದರು.

ಶಿರಸಿ ನಗರಸಭಾ ಅಧ್ಯಕ್ಷ ಪ್ರದೀಪ ಶೆಟ್ಟಿ ಮಾತನಾಡಿ, “ಘಟ್ಟದ ಮೇಲಿನ ಭಾಗಕ್ಕೆ ತಾರತಮ್ಯ ಆಗುತ್ತಿದೆ. ಶಿರಸಿ ನಗರ ಕಾರವಾರಕ್ಕಿಂತ ದೊಡ್ಡದಿದ್ದರೂ ಜಿಲ್ಲಾ ಕೇಂದ್ರ ಎಂಬ ಕಾರಣಕ್ಕೆ ನಗರೋತ್ಥಾನದಲ್ಲಿ 10 ಕೋಟಿ ರೂ ಜಾಸ್ತಿ ಅನುದಾನ ನೀಡಲಾಗಿದೆ. ತಿಂಗಳಿಗೆ 10 ಸಭೆಗಳಿಗೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿಗಳು ಕಾರವಾರಕ್ಕೆ ಹೋಗಬೇಕು. ಒಂದು ತಾಸಿನ ಸಭೆಗೆ ಇಡೀ ದಿನ ಹೋಗುತ್ತದೆ. ಶಿರಸಿ ಜಿಲ್ಲೆ ಪರ ಜನಾಭಿಪ್ರಾಯ ರೂಪುಗೊಳ್ಳುತ್ತಿದ್ದು, ಭಾವನಾತ್ಮಕ ಸಂಬಂಧ ಇಡೀ ಜಿಲ್ಲೆ ಜೊತೆಗೆ ಮುಂದುವರಿಯಲಿದೆ. ಅಭಿವೃದ್ಧಿ, ಅನಗತ್ಯ ತೊಂದರೆ ತಪ್ಪಿಸಲು ಪ್ರತ್ಯೇಕ ಜಿಲ್ಲೆ ಆಗಬೇಕು” ಎಂದರು.

ಸಮಿತಿ ಜಿಲ್ಲಾ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, “ಘಟ್ಟದ 5 ತಾಲೂಕುಗಳ ಜನರು 120-150 ಕಿ ಮೀ ದೂರದ ಕಾರವಾರಕ್ಕೆ ಹೋಗಿ ಕೆಲಸ ಮಾಡಿ ಬರಬೇಕು. ಇದರಿಂದ ಬಹಳ ತೊಂದರೆಯಾಗುತ್ತಿದ್ದು, ಇಡೀ ದಿನ ವೇಸ್ಟ್ ಆಗುತ್ತಿದೆ. ಅಭಿವೃದ್ಧಿ ಹಾಗೂ ಅನುಕೂಲದ ಉದ್ದೇಶದಿಂದ ಶಿರಸಿ ಜಿಲ್ಲೆ ಹೋರಾಟ ಇಂದಿನಿಂದ ಚುರುಕುಗೊಳಿಸಲಾಗಿದೆ. ನಿರಂತರ ಹೋರಾಟ ನಡೆಯಲಿದೆ” ಎಂದು ತಿಳಿಸಿದರು.

ಸಿದ್ದಾಪುರ ಭಾಗದ ಹೋರಾಟ ಸಮಿತಿ ಅಧ್ಯಕ್ಷ ಸಿ ಎಸ್ ಗೌಡರು ಮಾತನಾಡಿ, “ಶಿರಸಿ ಜಿಲ್ಲೆ ಆಗಬೇಕೆಂದು ಸಿದ್ದಾಪುರದಲ್ಲೂ ಪೂರಕ ಒತ್ತಡ ಬರುತ್ತಿದೆ. ಪ್ರತಿ ಗ್ರಾ ಪಂ.ದಿಂದ ಠರಾವು ಮಾಡಿಸುತ್ತಿದ್ದು, ಶಿರಸಿ ಮತ್ತು ಇತರ ತಾಲೂಕುಗಳಲ್ಲೂ ಒತ್ತಡದ ಠರಾವು ಆಗಬೇಕು. ಪ್ರಬಲ ಹೋರಾಟ ರೂಪುಗೊಂಡಾಗ ಸರ್ಕಾರದ ಸ್ಪಂದನೆ ಸಿಗುತ್ತದೆ” ಎಂದರು.