ಬತ್ತಿದ ಹೊಳೆ, ನದಿ : ಕುಡಿಯುವ ನೀರಿಗಾಗಿ ನಾಗರಿಕರ ಪರದಾಟ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಜಿಲ್ಲೆಯ ವಿವಿಧ ಗ್ರಾ ಪಂ.ಗಳಲ್ಲಿ ವರ್ಷಗಳ ಹಿಂದೆ ಕುಡಿಯುವ ನೀರು ಪೂರೈಕೆಗೆ ಜಲನಿಧಿ ಯೋಜನೆಗೆ ಚಾಲನೆಯನ್ನು ನೀಡಿದ್ದರೂ ಜಲನಿಧಿ ಟ್ಯಾಂಕಿಗಳಿಗೆ ನೀರು ಪೂರೈಕೆಯಾಗುವ ಜಲಮೂಲಗಳು ಬತ್ತಿರುವ ಕಾರಣ ನೀರು ತಲುಪದೇ ಜನರು ಪರಿತಪಿಸುತ್ತಿದ್ದಾರೆ.

ಮಹತ್ವಾಕಾಂಕ್ಷಿ ಯೋಜನೆಯನ್ನು ವರ್ಷಗಳ ಹಿಂದೆ ರಾಜ್ಯ ಸರಕಾರವು ವಿಶ್ವ ಬ್ಯಾಂಕ್, ಕೇಂದ್ರ ಸರಕಾರ ಹಾಗೂ ಸ್ಥಳಿಯಾಡಳಿತದ ನೆರವಿನಿಂದ ಆರಂಭಿಸಿತ್ತು. ಯೋಜನೆಯನ್ವಯ ಹಲವು ಗ್ರಾಮಗಳ ಎತ್ತರ ಪ್ರದೇಶಗಳಲ್ಲಿ ನೀರಿನ ಟ್ಯಾಂಕಿಗಳನ್ನು ನಿರ್ಮಿಸಿ ನಿಗದಿತ ಕೊಳವೆಬಾವಿ, ಹೊಳೆಯಲ್ಲಿ ತೋಡಿದ ಬಾವಿಗಳಿಂದ ನೀರೆತ್ತಿ, ಶೇಖರಿಸಿ ಪೂರೈಸಲಾಗುತ್ತಿತ್ತು. ಪ್ರಸ್ತುತ ಇಂತಹ ನೀರಿನ ಮೂಲಗಳು ಬತ್ತುತ್ತಿರುವ ಹಿನ್ನೆಲೆಯಲ್ಲಿ ಮಂಜೇಶ್ವರ ತಾಲೂಕಿನ ಹಲವು ಗ್ರಾ ಪಂ.ಗಳಲ್ಲಿ ಭೀಕರ ಕ್ಷಾಮ ಆವರಿಸಿದೆ. ನಾಗರಿಕರು ಕುಡಿಯುವ ನೀರಿಗೂ ಹಾತೊರೆಯುವ ಕಾಲ ಸನ್ನಿಹಿತವಾಗಿದೆ. ಉತ್ತರದ ಉಪ್ಪಳ ಹೊಳೆ, ಶಿರಿಯಾ ಹೊಳೆ, ಬಳ್ಳೂರು ಹೊಳೆಗಳಲ್ಲಿ ಒಂದಿಂಚೂ ನೀರಿಲ್ಲದೇ ಹೊಳೆಗಳಲ್ಲಿ ಜಲನಿಧಿ ನೀರಿಗಾಗಿ ತೋಡಿರುವ ಬಾವಿಗಳಲ್ಲೂ ನೀರಿನ ಒರತೆ ಕಡಿಮೆಯಾಗಿ ಸಮರ್ಪಕ ನೀರು ಪೂರೈಕೆಗೆ ತೊಡಕಾಗಿ ಪರಿಣಮಿಸಿದೆ.

ನೀರಿನ ಮೂಲಗಳನ್ನು ಸಮರ್ಪಕವಾಗಿ ಬಳಸಲು ಹಲವು ಕ್ರಮಗಳನ್ನು ಕೈಗೊಂಡು, ಮಳೆಗಾಲದ ಅವಧಿಯಲ್ಲಿ ಜಲಪೂರಣ ಯೋಜನೆಯನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಕ್ರಮವನ್ನು ಅನುಸರಿಸಿದ್ದರೂ ಹೆಚ್ಚಿನ ಮಂದಿ ಇಂತಹ ಕ್ರಮಗಳನ್ನು ಅನುಸರಿಸದ ಕಾರಣ ನೀರಿನ ಕ್ಷಾಮ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

ತಾಲೂಕಿನ ಮೀಂಜಾ, ವರ್ಕಾಡಿ, ಮಂಜೇಶ್ವರ ಸಹಿತ ಮಂಗಲ್ಪಾಡಿ, ಪೈವಳಿಕೆ, ಎಣ್ಮಕಜೆ ಗ್ರಾಮಗಳಲ್ಲಿ ನೀರಿನ ಕ್ಷಾಮ ತಲೆದೋರಿದೆ. ಕುಂಬಳೆ, ಬದಿಯಡ್ಕ ಗ್ರಾ ಪಂ.ಗಳಲ್ಲೂ ಸಮಸ್ಯೆ ಹೊರತಾಗಿಲ್ಲ. ಜಿಲ್ಲಾಡಳಿತ ಇತ್ತೀಚೆಗೆ ಕೊಡಮಾಡಿದ ನೀರಿನ ಟ್ಯಾಂಕಿಗಳು ಹಲವು ಗ್ರಾ ಪಂ ಪರಿಸರದಲ್ಲಿದ್ದು ಯಾವ ಗ್ರಾಮಕ್ಕೆ ತಲುಪಿಸುವುದು ಎಂಬ ದೊಡ್ಡ ಸಮಸ್ಯೆಯಲ್ಲಿ ಪಂಚಾಯತಗಳಿವೆ. ಪೈವಳಿಕೆ ಗ್ರಾ ಪಂ.ನಲ್ಲಿ ಇತ್ತೀಚೆಗೆ ಕೊಡಮಾಡಿದ ಬೃಹದಾಕಾರದ ಸಿಂಟೆಕ್ಸ್ ಟ್ಯಾಂಕಿಗಳು ಕಚೇರಿ ಪರಿಸರದಲ್ಲಿದ್ದು, ಧೂಳು ಹಿಡಿಯುತ್ತಿದೆ. ಜನಪ್ರತಿನಿಧಿಗಳು ಗ್ರಾಮ ಕಚೇರಿ ಅಧಿಕೃತರಿಗೆ ನೀರು ಪೂರೈಕೆ ಜವಾಬ್ದಾರಿ ವಹಿಸಿ ನುಣುಚಿಕೊಳ್ಳುವ ಸ್ವಭಾವವನ್ನು ತೋರುತ್ತಿದ್ದಾರೆ. ನಾಗರಿಕರು ಜನಪ್ರತಿನಿಧಿಗಳಲ್ಲಿ ನೀರಿನ ಸಮಸ್ಯೆಯನ್ನು ಹೇಳಿಕೊಂಡರೆ ಶೀಘ್ರವೇ ಸಮಸ್ಯೆ ಬಗೆಹರಿಸುವ ಬಗ್ಗೆ ಆಶ್ವಾಸನೆಯನ್ನು ನೀಡುತ್ತಿದ್ದಾರೆ. ದಿನ ಕಳೆದರೂ ಆಶ್ವಾಸನೆಗಳು ಕೇವಲ ಹಾರಿಕೆಯ ಮಾತಾಗಿ ಸಮಸ್ಯೆಗಳು ಪರಿಹರಿಸುವ ಉತ್ತರವಾಗದೇ ಉಳಿದಿದೆ.