ರಸ್ತೆ ಅವ್ಯವಸ್ಥೆ : ಅತಿಕಾರಿಬೆಟ್ಟು ಪಂಚಾಯತಿ ವಿರುದ್ಧ ಆಕ್ರೋಶ

ಕರಾವಳಿ ಅಲೆ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಂಜಿನಡ್ಕ ಶಿಮಂತೂರು ರಸ್ತೆ ಅವ್ಯವಸ್ಥೆಗಳ ಆಗರವಾಗಿದ್ದು, ಸ್ಥಳೀಯರು ಪಂಚಾಯತಿ ಅಧ್ಯಕ್ಷರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಅತಿಕಾರಿಬೆಟ್ಟು ಗ್ರಾಮದ ಪಂಜಿನಡ್ಕ ಪರೆಂಕಿಲ ಶಿಮಂತೂರು ಒಳರಸ್ತೆಯಿಂದ ಶಿಮಂತೂರು ದೇವಸ್ಥಾನದ ಮೂಲಕ ಮಂಗಳೂರು, ಸುರತ್ಕಲ್, ಹಳೆಯಂಗಡಿಗೆ ಸಮೀಪವಾಗಿದೆ. ಸುಮಾರು ಒಂದು ಕಿ ಮೀ ಉದ್ದದ ರಸ್ತೆಯಾದ ಪಂಜಿನಡ್ಕದ ಈ ಒಳರಸ್ತೆಯಲ್ಲಿ ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ಶಾಸಕರ ಅನುದಾನದ ಸ್ವಲ್ಪ ಕಾಂಕ್ರೀಟೀಕರಣ ನಡೆದಿದ್ದು, ಉಳಿದ ಅರ್ಧ ಕಚ್ಚಾ ಮಣ್ಣಿನ ರಸ್ತೆ ಧೂಳು ಮತ್ತು ಹೊಂಡಮಯವಾಗಿದ್ದು, ವಾಹನಗಳಿಗೆ ಹೋಗಲು ಅನಾನುಕೂಲ ಪರಿಸ್ಥಿತಿ ಉಂಟಾಗಿದೆ.

“ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ನೂತನ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ಅಧ್ಯಕ್ಷರ ಆಡಳಿತ ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ. ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಅಭಾವ, ರಸ್ತೆ ಅವ್ಯವಸ್ಥೆ ಮೊದಲಾದ ಸಮಸ್ಯೆಗಳಿದ್ದರೂ ಅಧ್ಯಕ್ಷರು ಇದಕ್ಕೂ ತಮಗೂ ಸಂಬಂದವೇ ಇಲ್ಲ ಎಂದು ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪಂಜಿನಡ್ಕ ಶಿಮಂತೂರು ರಸ್ತೆಯಾಗಿದ್ದು, ಈ ಬಗ್ಗೆ ಅನೇಕ ಬಾರಿ ಪಂಚಾಯತಿಗೆ ಮನವಿ ಸಲ್ಲಿಸಿದ್ದೇವೆ” ಎನ್ನುತ್ತಾರೆ ಸ್ಥಳೀಯರಾದ ಪ್ರಕಾಶ್ ಪೂಜಾರಿ.

“ಈ ಬಗ್ಗೆ ಪಂಚಾಯತಿ ಸಭೆಯಲ್ಲಿ ಪ್ರಸ್ತಾಪವಾದರೆ ಅಧ್ಯಕ್ಷರು ಮೌನಕ್ಕೆ ಶರಣಗುತ್ತಾರೆ. ಪಂಚಾಯತಿಯ ನೂತನ ಕಟ್ಟಡ ಕಾಮಗಾರಿಯೂ ಕುಂಟುತ್ತಾ ನಡೆಯುತ್ತಿದ್ದು, ಕೂಡಲೇ ಪಂಚಾಯತಿ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ದುರಸ್ತಿಪಡಿಸಲು ಅಧ್ಯಕ್ಷರು ಮುಂದಾಗುವುದರ ಜೊತೆಗೆ ಓಬಿರಾಯನ ಕಾಲದ ಅಪಾಯಕಾರಿ ಕುಡಿಯುವ ನೀರಿನ ಟ್ಯಾಂಕಿಯನ್ನು ದುರಸ್ತಿಪಡಿಸಲು ಮುಂದಾಗಬೇಕು ಇಲ್ಲದಿದ್ದರೆ ಪಂಚಾಯತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ಪ್ರಕಾಶ್ ಪೂಜಾರಿ ಎಚ್ಚರಿಸಿದ್ದಾರೆ.

LEAVE A REPLY