ರಸ್ತೆ ಅಗಲೀಕರಣದ ಸರ್ವೇಗೆ ಬಂದ ಅಧಿಕಾರಿಗಳಿಗೆ ದಿಗ್ಬಂಧನ

ಮಂಗಳೂರು : ರಸ್ತೆ ಅಗಲೀಕರಣದ ಸರ್ವೆಗೆ ನಿನ್ನೆ ಆಗಮಿಸಿದ ಅಧಿಕಾರಿಗಳಿಗೆ ನಗರದ ವೆಲೆನ್ಸಿಯಾ ರೆಡ್‍ಬಿಲ್ಡಿಂಗ್ ನಿವಾಸಿಗಳು ಪ್ರತಿರೋಧವೊಡ್ಡಿ ದಿಗ್ಭಂಧನ ಹಾಕಿದ ಘಟನೆ ನಡೆದಿದೆ.

ಯಾವುದೇ ಕಾರಣಕ್ಕೂ ತಾವು ರಸ್ತೆ ಅಗಲೀಕರಣಕ್ಕೆ ಅವಕಾಶ ನೀಡಲ್ಲ ಎಂದು ನಾಗರಿಕರು ಹೇಳಿದ್ದಾರೆ. ರಸ್ತೆ ಅಗಲೀಕರಣ ಮಾಡಿದರೆ ಹಲವು ಮಂದಿ ತಮ್ಮ ಮನೆಯನ್ನು ಕಳೆದುಕೊಳ್ಳುವ ಭೀತಿ ಇದೆ. ಇನ್ನು ಕೆಲವರು ಹೊಸದಾಗಿ ಕಟ್ಟಿದ ಮನೆ ಮುಂಭಾಗದ ಗೋಡೆ, ಕಂಪೌಂಡ್‍ಗಳನ್ನೂ ತೆರವು ಮಾಡಬೇಕಾಗಿದೆ. ಇಲ್ಲಿ ಅಗಲೀಕರಣ ಅನಗತ್ಯವಾಗಿದ್ದರೂ ರಸ್ತೆ ಅಗಲೀಕರಣಕ್ಕೆ ಮುಂದಾಗಿ ಸರ್ವೇ ಮಾಡಲು ಬಂದಿದ್ದ ಪಾಲಿಕೆ ಸಿಬ್ಬಂದಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಒಂದು ಹಂತದಲ್ಲಿ ಸ್ಥಳೀಯರು ಸರ್ವೇಯರ್ ಮೇಲೆ ಕೈ ಮಾಡುವ ಹಂತಲ್ಲೂ ತಲುಪಿದೆ. ಬಳಿಕ ಟಿಪಿಒ (ಟೌನ್ ಪ್ಲಾನಿಂಗ್ ಆಫೀಸರ್) ಶಿವರಾಜ್ ಅವರು ಇನ್ನೂ ಕೆಲವು ಸಿಬ್ಬಂದಿಗಳೊಂದಿಗೆ ಆಗಮಿಸಿ, ಇಲ್ಲಿ ಸರ್ವೆ ನಡೆಸುತ್ತಿರುವ ವಿಚಾರದ ಬಗ್ಗೆ ಸ್ಥಳೀಯರನ್ನು ಮನವೊಲಿಸಲು ಮುಂದಾಗಿದ್ದಾರೆ. ಆದರೆ ಅಷ್ಟಕ್ಕೂ ಸುಮ್ಮನಾಗದ ಸ್ಥಳೀಯರು ಇವರನ್ನು ಮತ್ತೆ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ತಮಗೆ ಸ್ಪಷ್ಟನೆ ನೀಡದೇ ತೆರಳದಂತೆಯೂ ದಿಗ್ಬಂಧನ ಹಾಕಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ತೆರಳುವಂತೆ ಬಲವಂತ ಮಾಡಿದ್ದಾರೆ ಎಂದು ಅಧಿಕಾರಿಗಳು ದೂರಿದ್ದಾರೆ.

ಕೊನೆಗೆ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಸರ್ವೇಯರ್ ಜಾರಿಕೊಂಡಿದ್ದರೆ, ಇನ್ನೊಂದೆಡೆ ಪಾಲಿಕೆ ಟಿಪಿಒ ಶಿವರಾಜ್ ಅವರು ಕೂಡಾ ಸ್ಥಳೀಯರ ಆಕ್ರೋಶವನ್ನು ಎದುರಿಸಲಾಗದೇ ಜಾಗ ಖಾಲಿ ಮಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಕಂಕನಾಡಿ ಮುಖ್ಯರಸ್ತೆಯ ಒಳದಾರಿಯಾಗಿ ಕಿರಿದಾದ ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ 2014ರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. 20 ಮಂದಿ ಸಹಿ ಹಾಕಿದ್ದರು. ಆದರೆ ಇಲ್ಲಿ ನಾವು ಅಗಲೀಕರಕ್ಕೆ ಬಿಡಲ್ಲ ಎಂದು ಹೇಳಿದ ಹಿನ್ನೆಲೆಯಲ್ಲಿ ಒಂದು ಬಾರಿ ಸ್ವತಃ ಮೇಯರ್ ಅವರೇ ಸ್ಥಳ ವೀಕ್ಷಣೆ ನಡೆಸಿ ತೆರಳಿದ್ದಾರೆ. ಆದರೆ ಇದೀಗ ಅವರೂ ಕೂಡಾ ಉಲ್ಟಾ ಹೊಡೆದಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

LEAVE A REPLY