ನಗರದ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಫ್ಲೈಓವರ್, ಅಂಡರ್ ಪಾಸ್ ಯೋಜನೆ

ನಾಗರಿಕರ ಒತ್ತಾಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸ್ಮಾರ್ಟ್ ಸಿಟಿಯಾಗುವತ್ತ ದಾಪುಗಾಲು ಇಟ್ಟಿರುವ ಮಂಗಳೂರು ಮಹಾನಗರ ವಿಸ್ತಾರವಾಗಿ ಬೆಳೆಯುತ್ತಿದೆ. ಆದರೆ ಇಲ್ಲಿನ ಟ್ರಾಫಿಕ್ ಸಮಸ್ಯೆ ಮಾತ್ರ ಬೃಹದಾಕಾರವಾಗಿದೆ. ಜಿಲ್ಲಾಡಳಿತ, ಮಂಗಳೂರು ನಗರ ಪಾಲಿಕೆ, ಆರ್ಟಿಒ ಹತ್ತು ಹಲವು ಯೋಜನೆಗಳನ್ನು ರೂಪಿಸಿದರೂ ಟ್ರಾಫಿಕ್ ಸಮಸ್ಯೆ ಬಗೆಹರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದರ ಪರಿಹಾರಕ್ಕೆ ಇರುವ ಒಂದೇ ಮಾರ್ಗವೆಂದರೆ ನಗರದ ಕೆಲವು ಕಡೆಗಳಲ್ಲಿ ಫ್ಲೈಓವರ್, ಅಂಡರ್ ಪಾಸುಗಳನ್ನು ನಿರ್ಮಿಸಬೇಕಾಗಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಹಂಪನಕಟ್ಟೆ, ಬಂಟ್ಸ್ ಹಾಸ್ಟೆಲ್, ನಂತೂರು ಜಂಕ್ಷನ್, ಕೆಪಿಟಿ, ಪಂಪ್ವೆಲ್, ಬೆಂದೂರ್ವೆಲ್, ಪಣಂಬೂರು ಜಂಕ್ಷನ್ ಇತ್ಯಾದಿ ಕಡೆಗಳಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆ ಇದೆ. ಪಂಪ್ವೆಲಿನಲ್ಲಿ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿದ್ದರೂ ಸದ್ಯ ಇದು ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಇನ್ನು ನಂತೂರಿನಲ್ಲಿ ಫ್ಲೈಓವರ್ ನಿರ್ಮಿಸಿ ಎಂದು ಬೇಡಿಕೆ ಇಟ್ಟರೂ ಇದು ಕಾರ್ಯರೂಪಕ್ಕೆ ಬರುತ್ತಿರುವಂತೆ ಕಾಣುತ್ತಿಲ್ಲ. ಕೊಟ್ಟಾರ ಚೌಕಿ, ಕುಂಟಿಕಾನ ಜಂಕ್ಷನ್, ಮರೋಳಿ ಕೈಕಂಬ ವೃತ್ತಗಳಲ್ಲಿ ಫ್ಲೆಓವರ್ ಆಗಿರುವುದರಿಂದ ಇಲ್ಲಿನ ಟ್ರಾಫಿಕ್ ಸಮಸ್ಯೆ ಕೊನೆಗೊಂಡಿದೆ. ರಾ ಹೆ 66ರಲ್ಲಿ ನಂತೂರು ಮತ್ತು ಕೆಪಿಟಿ ಫ್ಲೆಓವರುಗಳ ಆವಶ್ಯಕತೆ ಇದೆ.

ಹಂಪನಕಟ್ಟೆ, ಬಂಟ್ಸ್ ಹಾಸ್ಟೆಲ್, ಎಂ ಜಿ ರೋಡ್, ಕಂಕನಾಡಿ ಕರಾವಳಿ ವೃತ್ತ ಮುಂತಾದೆಡೆ ಸಂಚಾರ ಸಮಸ್ಯೆ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಆಗಬೇಕಿದೆ. 1992ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಹಂಪನಕಟ್ಟೆಯಲ್ಲಿ ಫ್ಲೈಓವರ್ ರಚನೆ ಪ್ರಸ್ತಾಪ ಬಂದಿತ್ತು. ಸಿಂಡಿಕೇಟ್ ಬ್ಯಾಂಕ್ ಕಟ್ಟಡದ ಬಳಿಯಿಂದ ಪುರಭವನದ ಬಳಿಯ ಕ್ಲಾಕ್ ಟವರಿನವರೆಗೆ ಇದನ್ನು ರಚಿಸುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆದಿತ್ತು. ಬಳಿಕ ಸಿಗ್ನಲ್ ವೃತ್ತದ ಬಳಿ, ಬೆಸೆಂಟ್ ಕಾಲೇಜಿನ ಬಳಿ ಫ್ಲೈಓವರ್ ನಿರ್ಮಾಣ ಅಗತ್ಯವಿದೆ ಎನ್ನುವ ಪ್ರಸ್ತಾಪ ಬಂದರೂ ಕಾರ್ಯರೂಪಕ್ಕೆ ಬಂದಿಲ್ಲ.

“ಮಂಗಳೂರು ಎಷ್ಟೇ ಬೆಳೆದರೂ ಇಲ್ಲಿನ ಟ್ರಾಫಿಕ್ ಸಮಸ್ಯೆ ಅದನ್ನು ಬೆಳೆಯುವುದಕ್ಕೆ ಬಿಡುವುದಿಲ್ಲ. ಇಲ್ಲಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಏನಾದರೂ ಕಾಂಕ್ರೀಟ್ ಪ್ಲಾನ್ ಹಾಕಿಕೊಳ್ಳಬೇಕಾಗಿದೆ. ಪಾದಚಾರಿ ಮೇಲ್ಸೇತುವೆ, ಜೊತೆಗೆ ಪ್ರತೀ ಬಿಲ್ಡಿಂಗ್ ಮುಂಭಾಗದಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಿದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಬಹುದು” ಎನ್ನುತ್ತಾರೆ ಉದ್ಯಮಿ ಶ್ರೀಕರ ಪೈ.