ನಗರದಿಂದ ರಾತ್ರಿ ವಿಮಾನ ನಿರ್ಗಮನ ತೀರಾ ವಿಳಂಬ

ವಿಮಾನ ನಿಲ್ದಾಣದಲ್ಲಿ ಸಿಐಎಸ್ಸೆಫ್ ಸಿಬ್ಬಂದಿ ಕೊರತೆ

ಮಂಗಳೂರು : ತಡ ರಾತ್ರಿ ವಿಮಾನ ಸೇವೆಗಳ ಸಂದರ್ಭ ಸೂಕ್ತ ಸುರಕ್ಷಾ ವ್ಯವಸ್ಥೆ ಒದಗಿಸಲು  ಅಗತ್ಯ ಸಿಬ್ಬಂದಿ ಲಭ್ಯರಿಲ್ಲದೇ ಇರುವುದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಕಷ್ಟದಲ್ಲಿ ಸಿಲುಕಿದೆ. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈಗಾಗಲೇ ಈ ಸಮಸ್ಯೆಯ ಬಗ್ಗೆ  ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಕಿರಣ್ ರೆಜ್ಜು ಗಮನ ಸೆಳೆದಿದ್ದು, ಸಿಐಎಸ್ಸೆಎಫ್ ಸಿಬ್ಬಂದಿಯ ಕೊರತೆ ತಡರಾತ್ರಿ ವಿಮಾನ ಸೇವೆಗಳನ್ನು ಬಾಧಿಸುತ್ತಿದೆ ಎಂದು ದೂರಿದ್ದರು.

ವಿಮಾನ ನಿಲ್ದಾಣಕ್ಕೆ ಒಟ್ಟು 226 ಸಿಐಎಸ್ಸೆಎಫ್ ಸಿಬ್ಬಂದಿಗಳು ಮಂಜೂರಾಗಿದ್ದರೂ ಸದ್ಯ ಅಲ್ಲಿ 203 ಸಿಬ್ಬಂದಿಗಳು ಕರ್ತವ್ಯದಲ್ಲಿದ್ದಾರೆ. ತಡರಾತ್ರಿ ಸುರಕ್ಷಾ ಸಿಬ್ಬಂದಿಯ ಕೊರತೆಯಿಂದಾಗಿ  ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಜೆಟ್ ಏರ್ವೇಸ್ ತಾನು ಆರಂಭಿಸಿದ್ದ 10.50ರ ವಿಮಾನ ಸೇವೆಯನ್ನು ಎಪ್ರಿಲ್ 15ರಿಂದ ರದ್ದುಗೊಳಿಸಲು ತೀರ್ಮಾನಿಸಿದೆ.

ಪ್ರಸಕ್ತ ಸಿಐಎಸ್ಸೆಎಫ್ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 5ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಒಂದರಿಂದ  ರಾತ್ರಿ 9 ಗಂಟೆಯ ತನಕ ಎರಡು ಶಿಫ್ಟುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ರಾತ್ರಿ 9 ಗಂಟೆಯ ನಂತರದ ವಿಮಾನ ಸೇವೆಗಳ ಸಂದರ್ಭ ಸುರಕ್ಷಾ ಸಿಬ್ಬಂದಿ ಕೊರತೆ ಎದುರಾಗಿದೆ.

ಆದರೆ ಸಿಐಎ ಹೆಚ್ಚುವರಿ ಮಹಾನಿರ್ದೇಶಕ  ಧರ್ಮೇಂದ್ರ ಕುಮಾರ್ ಹೇಳುವಂತೆ  ಮೂರನೇ ಶಿಫ್ಟಿಗೆ ಅನುಮತಿ ಕೋರಿ ವಿಮಾನ  ನಿಲ್ದಾಣ ಪ್ರಾಧಿಕಾರಕ್ಕೆ ಸಲ್ಲಿಸಲಾದ ಮನವಿ ಕಳೆದ ಆರು ತಿಂಗಳಿನಿಂದ ಬಾಕಿಯಿದೆ. “ಈಗಿನ ಸಿಬ್ಬಂದಿಯ ರಜೆ, ತರಬೇತಿ ಹಾಗೂ ವಾರದ ರಜೆಯನ್ನೂ ಕಡಿಮೆಗೊಳಿಸಿದ್ದೇವೆ. ಮತ್ತೆ ಮೂರನೇ ಶಿಫ್ಟ್ ಅವರ ಮೇಲೆ ಒತ್ತಡ ಹೇರಲಿದೆ. ಕೆಲವೊಮ್ಮೆ ಸಿಐಎಸ್ಸೆಎಫ್ ಸಿಬ್ಬಂದಿಗಳು ದಿನವೊಂದರಲ್ಲಿ 11 ಗಂಟೆ ಕೂಡ ಸೇವೆ ಸಲ್ಲಿಸುತ್ತಾರೆ” ಎಂದು ಅವರು ಹೇಳಿದ್ದಾರಲ್ಲದೆ ತಾವು ಈ ಸಮಸ್ಯೆಯ ಬಗ್ಗೆ ಸಂಸದ ಹಾಗೂ ಸಚಿವರ ಗಮನ ಸೆಳೆಯುವುದಾಗಿ ತಿಳಿಸಿದ್ದಾರೆ.

LEAVE A REPLY