ಸಿಗರೇಟು ಮಾರಲು ಬಂದವರು ಜ್ಯುವೆಲರಿ ಶೂಟೌಟ್ ಆರೋಪಿಗಳು

ಪೊಲೀಸರ ಚಾಣಾಕ್ಷತನಕ್ಕೆ ಶಹಬ್ಬಾಸ್

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಸಿಗರೇಟ್ ಪ್ಯಾಕ್ ಮಾರಾಟ ಮಾಡಲು ಬಂದಿದ್ದ ಯುವಕರ ಬಗ್ಗೆ ಸಂಶಯಗೊಂಡ ವಿಟ್ಲ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮತ್ತು ಜ್ಯುವೆಲ್ಲರಿ ಶೂಟೌಟ್ ಪ್ರಕರಣ ಬೆಳಕಿಗೆ ಬಂದಿದೆ.

ಅಪರಿಚಿತ ಯುವಕರಿಬ್ಬರು ಶನಿವಾರ ಬೆಳಗ್ಗೆ ವಿಟ್ಲದ ಖಾಸಗಿ ಬಸ್ ನಿಲ್ದಾಣದ ಅಂಗಡಿಯೊಂದಕ್ಕೆ ಸಿಗರೇಟ್ ಪ್ಯಾಕ್ ಮಾರಾಟ ಮಾಡಲು ಬಂದಿದ್ದರು. ಮಾಹಿತಿ ಪಡೆದ ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಯುವಕರ ವರ್ತನೆ ಅನುಮಾನಕ್ಕೆ ಕಾರಣವಾಗಿದ್ದರಿಂದ ಪೊಲೀಸರು ಯುವಕರನ್ನು ವಶಕ್ಕೆ ಪಡೆದಿದ್ದರು. ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಂತೆ ಒಬ್ಬಾತ ತಿಂಗಳಾಡಿಯ ಮಹಮ್ಮದ್ ಫಯಾಝ್ (20) ಮತ್ತು ಮತ್ತೋರ್ವ ಕೋಟೆಕಾರು ಕೆ ಸಿ ರೋಡು ನಿವಾಸಿ ಯಾಹ್ಯಾ (26) ಎಂದು ಹೇಳಿಕೊಂಡಿದ್ದರು. ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಂತೆ ತಿಂಗಳಾಡಿಯ ಫಯಾಜ್ ಯಾನೆ ಫಯ್ಯಾ 2015ರಲ್ಲಿ ಪುತ್ತೂರಿನಲ್ಲಿ ನಡೆದಿದ್ದ ರಾಜಧಾನಿ ಜ್ಯುವೆಲ್ಲರಿ ಶೂಟೌಟ್ ಪ್ರಕರಣದ ಆರೋಪಿಯಾಗಿದ್ದು ಬಳಿಕ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ವಿದೇಶದಿಂದ ಬಂದಿದ್ದ ಫಯಾಜ್ ಇದೀಗ ವಿಟ್ಲ ಸಮೀಪದ ಕೆಲಿಂಜ ಪಾತ್ರತೋಟ ನಿವಾಸಿಯಾಗಿದ್ದು ಮತ್ತೋರ್ವ ಆರೋಪಿ ಯಹ್ಯಾ ಜೊತೆ ಸೇರಿ ಕಳ್ಳತನ ನಡೆಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಯಹ್ಯಾ ವೀರಕಂಬ ಗ್ರಾಮದ ಶೀನಾಜೆ ಉಮ್ಮರ್ ಎಂಬವರ ಅಂಗಡಿ ಕಳ್ಳತನ ಮಾಡಿದ್ದ ಬಗ್ಗೆ ಬಾಯ್ಬಿಟ್ಟಿದ್ದು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಂತೆ ತನಿಖೆ ನಡೆಯುತ್ತಿದೆ.