ಉಗ್ರರನ್ನು ಪಾಕ್ ಸದೆಬಡಿಯದಿದ್ದರೆ ಅಮೆರಿಕಾವೇ ಈ ಕೆಲಸಮಾಡಲಿದೆ

ಸಿಐಎ ಎಚ್ಚರಿಕೆ

ವಾಷಿಂಗ್ಟನ್ : ಪಾಕಿಸ್ತಾನವು ತನ್ನ ದೇಶದಲ್ಲಿ ಉಗ್ರವಾದಿಗಳ ಸುರಕ್ಷಿತ ತಾಣಗಳನ್ನು ನಿರ್ಮೂಲನೆಗೈಯ್ಯದೇ ಇದ್ದರೆ, ಅವುಗಳನ್ನು  ನಾಶಗೈಯ್ಯಲು ಅಮೆರಿಕಾ ತನ್ನಿಂದಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಎಂದು ಅಮೆರಿಕಾದ ಸಿಐಎ ಮುಖ್ಯಸ್ಥ ಮೈಕ್ ಪೊಂಪಿಯೊ ಎಚ್ಚರಿಸಿದ್ದಾರೆ.

ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಜಿಮ್ ಮೆಟ್ಟಿಸ್ ಅವರ ಇಸ್ಲಾಮಾಬಾದ್ ಭೇಟಿಗೆ ಮುಂಚಿತವಾಗಿ ಮೈಕ್ ಅವರ ಈ ಎಚ್ಚರಿಕೆ ಬಂದಿದೆ. ಅಫ್ಘಾನಿಸ್ತಾನದ ವಿಚಾರದಲ್ಲಿ ಅಮೆರಿಕಾ ತಳೆದಿರುವ ಹೊಸ ನಿಲುವನ್ನು ಒಪ್ಪಿಕೊಳ್ಳುವಂತೆ ಪಾಕಿಸ್ತಾನದ ಮನವೊಲಿಸುವುದೇ ಜಿಮ್ ಅವರ ಭೇಟಿಯ ಉದ್ದೇಶವಾಗಿದೆ.

ಈ ನಿಟ್ಟಿನಲ್ಲಿ ಟ್ರಂಪ್ ಆಡಳಿತ ಪಾಕಿಸ್ತಾನವನ್ನು ಹೇಗೆ ಒಪ್ಪಿಸಬಹುದು ಎಂದು ಪತ್ರಕರ್ತರು ಕೇಳಿದಾಗ ಪೊಂಪಿಯೊ ಅವರಿಂದ ಮೇಲಿನ ಉತ್ತರ ಬಂದಿದೆ. “ನಾವು ಅಫ್ಘಾನಿಸ್ತಾನದಲ್ಲಿ  ಮಾಡಲುದ್ದೇಶಿಸಿದ ಕೆಲಸಕ್ಕೆ ಪಾಕಿಸ್ತಾನದಲ್ಲಿರುವ ಉಗ್ರರ ಸುರಕ್ಷಿತ ತಾಣಗಳು ಅಡ್ಡಗಾಲಾಗಿವೆ ಎಂದು ಜಿಮ್ ಅವರು ಪಾಕಿಸ್ತಾನಕ್ಕೆ ಮನಗಾಣಿಸಲು ಸರ್ವ ಪ್ರಯತ್ನ ನಡೆಸಲಿದ್ದಾರೆ” ಎಂದು ಪೊಂಪಿಯೊ ಹೇಳಿದ್ದಾರೆ. “ಒಂದು ವೇಳೆ ಪಾಕಿಸ್ತಾನ ಉಗ್ರರ ತಾಣಗಳನ್ನು ನಿರ್ಮೂಲನೆಗೈಯ್ಯಲು ನಿರಾಕರಿಸಿದರೆ ಅವುಗಳು ಮುಂದೆ ಇಂತಹ ಸುರಕ್ಷಿತ ತಾಣಗಳಾಗಿ ಉಳಿದಿರದಂತೆ ಮಾಡಲು ನಾವು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ” ಎಂದೂ ಅವರು ತಿಳಿಸಿದ್ದಾರೆ.

ಪಾಕಿಸ್ತಾನದ ಫಟಾ ಪ್ರಾಂತ್ಯದಲ್ಲಿ 2004ರಿಂದ ಸಿಐಎ ಡ್ರೋನ್ ದಾಳಿ ನಡೆಸುತ್ತಿದ್ದರೂ ಟ್ರಂಪ್  ಆಡಳಿತದಡಿಯಲ್ಲಿ ಇಂತಹ ದಾಳಿಗಳ ವಿಸ್ತಾರ ಹೆಚ್ಚಿಸುವ ಉದ್ದೇಶವಿದೆಯೆನ್ನಲಾಗಿದೆ.