ಮಾಂಟ್ರಾಡಿಯ ಚರ್ಚ್ ಫಾರ್ಮ್ ಹೌಸಿಗೆ ಬೆಂಕಿ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಮಾಂಟ್ರಾಡಿ ಗ್ರಾಮದ ಪೆಂಚಾರಿನಲ್ಲಿ ಶಿರ್ತಾಡಿ ಚರ್ಚಿಗೆ ಸಂಬಂಧಿಸಿದ ಫಾರ್ಮ್ ಹೌಸಿನಲ್ಲಿ ಬುಧವಾರ ಮಧ್ಯಾಹ್ನ ಶಾರ್ಟ್ ಸಕ್ರ್ಯೂಟಿನಿಂದ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 3 ಲಕ್ಷ ರೂ ಮೌಲ್ಯದ ಸೊತ್ತುಗಳು ನಾಶವಾಗಿದೆ.

ಮಾಂಟ್ರಾಡಿ ಪೆಂಚಾರಿನಲ್ಲಿ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್ ಅಧೀನದಲ್ಲಿರುವ ಫಾರ್ಮ್ ಹೌಸಲ್ಲಿ ಬುಧವಾರ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಬೆಂಕಿ ಕಾಣಿಸಿಕೊಂಡು ಫಾರ್ಮ್ ಹೌಸಿನಲ್ಲಿದ್ದ ಸುಮಾರು ಒಂದು ಸಾವಿರ ರಬ್ಬರ್ ಶೀಟ್, ರಬ್ಬರ್ ಡ್ರೈಯರ್ ಹಾಗೂ ಮನೆಯ ಅರ್ಧಭಾಗ ಹಾನಿಗೊಳಗಾಗಿದೆ. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಕೊನೆಗೆ ಮೂಡುಬಿದಿರೆ ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ನೇತೃತ್ವದಲ್ಲಿ ಬೆಂಕಿ ಶಮನ ಮಾಡಲಾಯಿತು.

ಸುಮಾರು ಮೂರು ಲಕ್ಷ ರೂಪಾಯಿವರೆಗಿನ ಸೊತ್ತು ಗಳು ಬೆಂಕಿಗಾಹುತಿಯಾಗಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟಿನಿಂದ ಘಟನೆ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.