ಕ್ರೈಸ್ತ ಗುರು ಚುನಾವಣಾ ಪ್ರಚಾರÀ ನಡೆಸುವಂತಿಲ್ಲ

ಆರ್ಚಬಿಷಪ್ ಫಿಲಿಪ್ ಫೆರಾರೋ

ಗೋವಾ ಆರ್ಚ್‍ಬಿಷಪ್ ಉವಾಚ

ಪಣಜಿ : ಫೆಬ್ರವರಿ 4ರಂದು ಗೋವಾ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಚರ್ಚ್ ಧರ್ಮಗುರುಗಳು ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವಂತಿಲ್ಲ ಎಂದು ಗೋವಾ ಮತ್ತು ದಾಮನ್ ಆರ್ಚಬಿಷಪ್ ಫಿಲಿಪ್ ನೇರಿ ಫೆರಾರೋ ತಿಳಿಸಿದರು.

“ಮುಂಬರುವ ಚುನಾವಣೆಯಲ್ಲಿ ಹೇಗೆ ಮತ ಚಲಾಯಿಸಬೇಕೆಂಬುದರ ಬಗ್ಗೆ ಶೀಘ್ರವೇ ಸಾಮಾಜಿಕ ನ್ಯಾಯ ಮತ್ತು ಶಾಂತಿ ಪರಿಷತ್ತು (ಸಿಎಸ್‍ಜೆಪಿ) ಮಾರ್ಗಸೂಚಿ ಜಾರಿಗೊಳಿಸಲಿದೆ” ಎಂದವರು ಪತ್ರಿಕೆಯೊಂದಕ್ಕೆ ತಿಳಿಸಿದರು.

`ಒಂದೊಮ್ಮೆ ಚರ್ಚುಗಳ ಧರ್ಮಗುರುಗಳು ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡಿದರೆ ಏನು ?’ ಎಂದು ಕೇಳಲಾದ ಪ್ರಶ್ನೆಗೆ, “ಅವರು ಹಾಗೇ ಮಾಡಲು ಸಾಧ್ಯವಿಲ್ಲ. ನಿಮಗೆ ಗೊತ್ತಿದ್ದರೆ, ದಯವಿಟ್ಟು ನನಗೆ ಮಾಹಿತಿ ಕೊಡಿ” ಎಂದುತ್ತರಿಸಿದರು.

ಕಳೆದ ವರ್ಷ ಡಿಸೆಂಬರ್ 27ರಂದು ಆರ್ಚಬಿಷಪ್ ಪ್ಯಾಲೇಸಿನಲ್ಲಿ ನಡೆದಿದ್ದ ಕ್ರಿಸ್ಮಸ್ `ಸ್ನೇಹ-ಸಮ್ಮಿಳನ’ ಸಮಾರಂಭದಲ್ಲಿ ಮಾತನಾಡಿದ್ದ ಆರ್ಚ್‍ಬಿಷಪ್, ಪ್ರಸಕ್ತ ಗೋವಾ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಪ್ರಸ್ತಾವಿಸಲಾಗಿರುವ ಶಿಕ್ಷಣ ನೀತಿ, ಕ್ರೈಸ್ತ ಸಮುದಾಯದ ಮೇಲೆ ದಾಳಿ ಮತ್ತು ರಾಜ್ಯ ಪರಿಸರ ಹಾಗೂ ಸಾಮಾಜಿಕ ವ್ಯವಸ್ಥೆ ಮೇಲಾಗಿರುವ ಗಂಭೀರ ಅಪಾಯಗಳಂತಹ ವಿಷಯಗಳಲ್ಲಿ ಸರ್ಕಾರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದೆ. ಇದರಿಂದ ಭಾರೀ ಭ್ರಷ್ಟಾಚಾರ ತಲೆದೋರಿದೆ ಮತ್ತು ಸರ್ಕಾರವನ್ನು ನಿರ್ಬಲಗೊಳಿಸಿದೆ ಎಂದಿದ್ದರು.

ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯ ಹೆಸರೆತ್ತದೆ ಮತದಾನ ಹೇಗೆ ಮಾಡಬೇಕೆಂಬುದರ ಬಗ್ಗೆ ಚರ್ಚ್ ಮಾರ್ಗಸೂಚಿ ಇರುತ್ತದೆ ಎಂದು ಆರ್ಚ್‍ಬಿಷಪ್ ಫೆರಾರೋ ಸ್ಪಷ್ಟಪಡಿಸಿದರು.