ಚಿತ್ತರಂಜನ್ ಹತ್ಯೆಗೆ 21 ವರ್ಷವಾದರೂ ಆರೋಪಿಗಳ ಪತ್ತೆಯಿಲ್ಲ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : 1996ರಲ್ಲಿ ಭಟ್ಕಳದ ಬಿಜೆಪಿ ಶಾಸಕರಾಗಿದ್ದ ಡಾ ಯು ಚಿತ್ತರಂಜನ್ ಅವರು ಹಂತಕರ ಗುಂಡಿಗೆ ಬಲಿಯಾಗಿ ಇಂದಿಗೆ ಸರಿಯಾಗಿ 21 ವರ್ಷವಾಗಿದ್ದರೂ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.

ಹತ್ಯಾ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಇದೊಂದು ಪತ್ತೆಯಾಗದ ಪ್ರಕರಣವೆಂದು ಕೋರ್ಟಿಗೆ ಸಿ ವರದಿ ಸಲ್ಲಿಸಿದ್ದರಿಂದ ಈ ತನಿಖೆ ಬಹುತೇಕ ನೆನೆಗುದಿಗೆಗೆ ಬಿದ್ದಂತಾಗಿದೆ. ರಂಜನ್ ಡಾಕ್ಟ್ರು ಎಂದೇ ಪ್ರಸಿದ್ದಿಯಾಗಿದ್ದ ಡಾ ಯು ಚಿತ್ತರಂಜನ್ 1996ರ ಎಪ್ರಿಲ್ 10ರಂದು ರಾತ್ರಿ ತಮ್ಮ ಮನೆಯಲ್ಲಿ ಟೀವಿಯ ಸುದ್ದಿ ವೀಕ್ಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಹಂತಕರ ಗುಂಡಿಗೆ ಬಲಿಯಾಗಿದ್ದರು. ರಾಜ್ಯದ ಓಬ್ಬ ಶಾಸಕನ ಹತ್ಯೆಯಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಅಂದಿನ ಸರ್ಕಾರ ಹತ್ಯಾ ತನಿಖೆಗಾಗಿ ನ್ಯಾ ಮೂ ರಾಮಚಂದ್ರಯ್ಯ ಆಯೋಗ ರಚಿಸಿತ್ತು. ಇದಾದ ಸ್ವಲ್ಪ ಸಮಯದಲ್ಲೇ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಅಂದು ತನಿಖೆ ಕೈಗೆತ್ತಿಕೊಂಡ ಸಿಬಿಐ 250ಕ್ಕೂ ಅಧಿಕ ಜನರ ಸಾಕ್ಷಿಗಳ ವಿಚಾರಣೆ ನಡೆಸಿ ಕೊನೆಗೆ ಇದೊಂದು ಪತ್ತೆಯಾಗದ ಪ್ರಕರಣ ಎಂದು ನ್ಯಾಯಾಲಯಕ್ಕೆ ಸಿ ವರದಿ ಸಲ್ಲಿಸಿತ್ತು.

ಸಿಬಿಐನ ಸಿ ವರದಿಗೆ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ರಾಮಚಂದ್ರ ಹೆಗಡೆ ಎನ್ನುವವರು ಬೆಂಗಳೂರಿನ ಖ್ಯಾತ ನ್ಯಾಯವಾದಿ ದೊರೈರಾಜು ಅವರನ್ನು ಕರೆಸಿ ನ್ಯಾಯಾಲಯದಲ್ಲಿ ವಾದ ಮಂಡಿಸಿ ಹತ್ಯಾ ತನಿಖೆಯನ್ನು ಮರು ಆರಂಭಿಸುವಂತೆ ಮಾಡಿದ್ದರು. ನ್ಯಾಯಾಲಯ ಸಿಬಿಐಗೆ 6 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕೆಂದು ಆದೇಶ ನೀಡಿತ್ತು. ಆದರೆ ಸಿಬಿಐನವರು ನ್ಯಾಯಾಲಯಕ್ಕೆ ಭಟ್ಕಳ ಕೋಮುಗಲಭೆ ತನಿಖೆಗೆ ರಚಿಸಿದ ನ್ಯಾ ಮೂ ಜಗನ್ನಾಥ ಶೆಟ್ಟಿ ಆಯೋಗ ಮತ್ತು ಚಿತ್ತರಂಜನ್ ಹತ್ಯಾ ತನಿಖೆಗೆ ನೇಮಕವಾದ ರಾಮಚಂದ್ರಯ್ಯ ಆಯೋಗದ ವರದಿಗಳು ಮಂಡನೆಯಾದರೆ ತನಿಖೆಗೆ ಸಹಕಾರಿಯಾದೀತು ಎಂದು ತಿಳಿಸಿತ್ತು.