ಕಳಪೆ ರಸ್ತೆ ಕಾಮಗಾರಿಗೆ ತತ್ತರಿಸಿದ ಚಿತ್ರಾಪು ಜನತೆ

ಮುಲ್ಕಿ : ಇಲ್ಲಿನ ನಗರ ಪಂಚಾಯತಿ ವ್ಯಾಪ್ತಿಯ ಚಿತ್ರಾಪು ವಾರ್ಡಿನ ಪ್ರಧಾನ ರಸ್ತೆಯ ಒಳಚರಂಡಿ ಯೋಜನೆಯ ನಿಧಾನಗತಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಜನತೆ ತತ್ತರಿಸಿ ಹೋಗಿದ್ದು ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ನಗರೋತ್ಥಾನ ಯೋಜನೆಯಡಿಯಲ್ಲಿ ಒಳಚರಂಡಿ ಯೋಜನೆಗೆ ಮೂಲ್ಕಿ ನಗರಪಂಚಾಯತಿ ವ್ಯಾಪ್ತಿಯ 5 ಕಡೆಗಳಲ್ಲಿ ಸುಮಾರು 2 ಕೋಟಿ ರೂ ಕಾಮಗಾರಿ ಮಂಜೂರಾಗಿದ್ದು ಅದರಂತೆ ಮೂಲ್ಕಿ ರಾಷ್ಟ್ರೀಯ ಹೆದ್ದಾರಿಯಿಂದ ಕಾರ್ನಾಡು ಬೈಪಾಸ್ ಬಳಿ ಚಿತ್ರಾಪು ರಸ್ತೆಯ ಒಳಚರಂಡಿ ಯೋಜನೆ ಕಾಮಗಾರಿ ಅರ್ದಂಬರ್ದ ನಡೆದಿದ್ದು ಪರಿಸರವಿಡೀ ಧೂಳುಮಯವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳಚರಂಡಿ ಯೋಜನೆಗೆ ಹಾಕಿರುವ ಕಬ್ಬಿಣದ ಸರಳುಗಳು ರಸ್ತೆಯ ಬದಿಯಲ್ಲಿ ಕಾಣುತ್ತಿದ್ದು ಅಪಾಯಕ್ಕೆ ಎಡೆಮಾಡಿಕೊಡುತ್ತಿದೆ. ಕಾಮಗಾರಿಗೆ ಆರಂಭದಿಂದಲೇ ವಿಘ್ನ ಕಾಡಿದ್ದು ಮೊದಲಿಗೆ ಹಾಸನ ಮೂದಲ ಗುತ್ತಿಗೆದಾರ ಕೆಲಸ ವಹಿಸಿಕೊಂಡಿದ್ದರು. ಬಳಿಕ ಕಾಮಗಾರಿ ನಿಧಾನಗತಿಯನ್ನು ಪ್ರಶ್ನಿಸಿ ಸ್ಥಳೀಯರು ಮೂಲ್ಕಿ ನ ಪಂ.ಗೆ ದೂರು ನೀಡಿದಾಗ ನ ಪಂ ಅಧ್ಯಕ್ಷ ಸುನಿಲ್ ಆಳ್ವ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಶುರುವಾದ ಕಾವiಗಾರಿ ಮತ್ತೆ ನಿಲ್ಲಿಸಿದ್ದು ಪರಿಸರದ ಮನೆಯವರಿಗೆ ಧೂಳಿನಿಂದ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇದೇ ರೀತಿಯ ಕಾಮಗಾರಿ ಮೂಲ್ಕಿ ವಿಜಯಾ ಕಾಲೇಜು ರಸ್ತೆಯಲ್ಲಿ ನಡೆಯುತ್ತಿದ್ದು ಅಲ್ಲಿಯೂ ಧೂಳಿನ ಕಾಟ ಸ್ಥಳೀಯರನ್ನು ನಿದ್ದೆಕೆಡಿಸಿದೆ. ಕಳೆದ ದಿನಗಳ ಹಿಂದೆ ಮುಲ್ಕಿ ನ ಪಂ ಮಾಸಿಕ ಸಭೆಯಲ್ಲಿ ನಿಧಾನಗತಿ ಕಾಮಗಾರಿ ಬಗ್ಗೆ ಸ್ಥಳೀಯ ಪಂಚಾಯತಿ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದರು.