ಚಿರಯೌವನೆ ರೇಖಾಗೆ 63

ಮೊನ್ನೆ ಆಕ್ಟೋಬರ್ 10ಕ್ಕೆ ಎವರ್ ಗ್ರೀನ್ ನಟಿ ರೇಖಾ 63 ವಸಂತಗಳನ್ನು ಪೂರೈಸಿ 64ಕ್ಕೆ ಕಾಲಿಟ್ಟಿದ್ದಾಳೆ. ಆದರೆ ಆಕೆಯ ಆ ಸೌಂದರ್ಯ ಮಾತ್ರ ಇನ್ನೂ ಯುವನಟಿಯರನ್ನು ನಾಚಿಸುವಂತಿದೆ. ಪ್ರಶಸ್ತಿ ಪ್ರದಾನ ಸಮಾರಂಭವೇ ಇರಲಿ ಅಥವಾ ಬಿಟೌನಿನ ಯಾವುದೇ ಫಂಕ್ಷನ್ನಿಗಾಗಲೀ ಜರತಾರಿ ಸೀರೆಯುಟ್ಟು ಮೈ ತುಂಬಾ ಒಡವೆ ಧರಿಸಿ ಕಣ್ಣಿಗೆ ಕಾಡಿಗೆ ತೀಡಿ ಹಣೆಗೆ ಬಿಂದಿ ಧರಿಸಿ ಬಂದಳೆಂದರೆ ಆ ಸಮಾರಂಭಕ್ಕೆ ಕಳೆಗಟ್ಟುವುದು ಸುಳ್ಳಲ್ಲ. ಅಂತಹ ಚರಿಷ್ಮಾ ಆಕೆಯದು.

ದಶಕಗಳಷ್ಟು ಕಾಲ ಬಾಲಿವುಡ್ಡನ್ನು ವಸ್ತುಶಃ ಆಳಿದ ರೇಖಾಳ ಕೆಲವು ಚಿತ್ರಗಳು ಇನ್ನೂ ಸಿನಿರಸಿಕರ ಮನದಲ್ಲಿ ಹಸಿರಾಗಿವೆ. `ಸಿಲ್ ಸಿಲಾ’, `ಉಮ್ರಾವ್ ಜಾನ್’, `ಸುಹಾಗ್’ ಮೊದಲಾದ ಚಿತ್ರಗಳಲ್ಲಿಯ ಆಕೆಯ ನಟನೆಯನ್ನು ಇಂದಿಗೂ ಅವಳ ಅಭಿಮಾನಿಗಳು ಜ್ಞಾಪಿಸಿಕೊಳ್ಳುತ್ತಾರೆ. ಕಣ್ಣಿನಲ್ಲಿಯೇ ಮಾತಾಡುವ ರೇಖಾಳ ಆ ಮೋಹಕನೋಟ, ಕಿರುನಗು ಸೂಸುವ ಆ ಮಾದಕ ತುಟಿಗಳಿಗೆ ಸೋಲದವರೇ ಇರಲಿಲ್ಲ. ಆದರೆ ರೇಖಾಳ ಬಾಲ್ಯ ಜೀವನ, ವೃತ್ತಿ ಜೀವನದ ಪ್ರಾರಂಭದಲ್ಲಿ ಆಕೆ ಬಹಳಷ್ಟು ಕಷ್ಟ ಅನುಭವಿಸಿದ್ದಳು.

ಭಾನುರೇಖಾ ಯಾನೆ ರೇಖಾ ಅವಿವಾಹಿತ ದಂಪತಿಗೆ ಹುಟ್ಟಿದ ಕೂಸಾಗಿದ್ದಳು. ತಮಿಳು ನಟ ಜೆಮಿನಿ ಗಣೇಶನ್ ಹಾಗೂ ತೆಲುಗು ನಟಿ ಪುಷ್ಪವಲ್ಲಿಯ ಪ್ರೇಮದ ಕೂಸಾಗಿದ್ದಳು ರೇಖಾ. ರೇಖಾಗೆ ಕೆಲವಾರು ಅರ್ಧ ಸಹೋದರಿಯರು, ಸಹೋದರ ಇದ್ದರೂ ಯಾರೂ ಆಕೆಯ ಜೊತೆ ಆತ್ಮೀಯವಾಗಿರಲಿಲ್ಲ. ಆರ್ಥಿಕ ಪರಿಸ್ಥಿತಿ ತುಂಬಾ ಕೆಟ್ಟದ್ದಾಗಿದ್ದರಿಂದ ರೇಖಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು. ಮೊದಲು ಆಕೆ ಕೆಲವು ತೆಲುಗಿನ ಬಿ ಹಾಗೂ ಸಿ ಗ್ರೇಡ್ ಚಿತ್ರಗಳಲ್ಲಿ ನಟಿಸಿದ್ದಳು. ಹಿಂದಿ ಸಿನಿಮಾಗಳಲ್ಲಿ ರೇಖಾ ಕಪ್ಪಗಿದ್ದಳು ಎನ್ನುವ ಕಾರಣದಿಂದಲೇ ಆಕೆಗೆ ಅವಕಾಶ ಸಿಗುತ್ತಿರಲಿಲ್ಲ. ಅದಲ್ಲದೇ ಹಿಂದಿಯೂ ಆಕೆಗೆ ಸರಿಯಾಗಿ ಬರುತ್ತಿರಲಿಲ್ಲ. ತನ್ನ ಕಠಿಣ ಪರಿಶ್ರಮದಿಂದ ತನ್ನ ವ್ಯಕ್ತಿತ್ವವನ್ನೇ ಬದಲಿಸಿಕೊಂಡು 1976ರಲ್ಲಿ `ದೋ ಅಂಜಾನೆ’ ಚಿತ್ರದ ಮೂಲಕ ಸಿನಿರಸಿಕರ ಮನ ಗೆದ್ದಳು. ಅಲ್ಲಿಂದ ಆಕೆ ಹಿಂದಿರುಗಿ ನೋಡಿಲ್ಲ.

ರೇಖಾ ಹೆಚ್ಚಾಗಿ ಲಿಂಕಪ್ಪಿನಿಂದಲೇ ಸುದ್ದಿಯಾಗುತ್ತಿದ್ದಳು. ರೇಖಾ ಹೆಸರು ಹಲವರ ಜೊತೆ ಕೇಳಿಬಂದಿತ್ತು. ವಿನೋದ್ ಮೆಹ್ರಾ, ರಾಜ್ ಬಬ್ಬರ್, ಸಂಜಯ್ ದತ್ ಅಲ್ಲದೇ ಅಕ್ಷಯ್ ಕುಮಾರ್ ಜೊತೆಯೂ ಆಕೆಯ ಹೆಸರು ಲಿಂಕಪ್ ಆಗಿತ್ತು. ರೇಖಾ ಹಾಗೂ ಅಮಿತಾಭ್ ಬಚ್ಚನ್ ನಡುವಿನ ಪ್ರೇಮಪ್ರಸಂಗವಂತೂ ಆಗ ಬಿಗ್ ಬಿ ಹಾಗೂ ಜಯಾ ಬಚ್ಚನ್ ಮದುವೆ ಮುರಿಯುವಲ್ಲಿಗೆ ಹೋಗಿತ್ತು. ನಂತರ ಅಮಿತಾಭ್ ರೇಖಾ ಜೊತೆ ನಟಿಸುವುದೇ ಇಲ್ಲ ಎಂದು ಪ್ರತಿಜ್ಞೆ ಮಾಡಿದ ನಂತರವೇ ಅಮಿತಾಬ್-ಜಯಾ ಮದುವೆ ಉಳಿದಿದ್ದು.

ರೇಖಾ ಮುಖೇಶ್ ಅಗರ್ವಾಲ್ ಎನ್ನುವವರನ್ನು 1990ರಲ್ಲಿ ಮದುವೆಯಾಗಿದ್ದರೂ ಅವರ ಮದುವೆ ದುರಂತದಲ್ಲಿ ಕೊನೆಗೊಂಡಿತ್ತು. ಮದುವೆಯಾದ ಒಂದೇ ವರ್ಷದಲ್ಲಿ ಮುಖೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಗೆ ರೇಖಾ-ಅಮಿತಾಭ್ ಆಫೇರ್ ಕಾರಣ ಎನ್ನಲಾಗಿತ್ತು. ರೇಖಾ ಧರಿಸುವ ಸಿಂಧೂರ, ಮಂಗಲಸೂತ್ರ ಎಲ್ಲವೂ ಅಮಿತಾಭ್ ಮೇಲೆ ಆಕೆಗಿರುವ ಅಪರಿಮಿತ ಪ್ರೇಮವೇ ಕಾರಣ ಎನ್ನುವವರೂ ಇದ್ದಾರೆ.

ರೇಖಾ ಈಗ ಒಂಟಿ. ಆದರೂ ಆಕೆಯ ಆತ್ಮಸ್ಥೈರ್ಯ ಮಾತ್ರ ಮೆಚ್ಚುವಂತದ್ದು. `ನಾನು ಬರೀ ಹೆಂಡತಿ ಅಥವಾ ಅಮ್ಮ ಆಗಲು ಬಯಸುವುದಿಲ್ಲ’ ಎಂದು ಸಂದರ್ಶನವೊಂದರಲ್ಲಿ ಆಕೆ ಹೇಳಿಕೊಂಡಿದ್ದಾಳೆ.

`ವಿಶ್ವದ ಗ್ರೇಟೆಸ್ಟ್ ಆರ್ಟಿಸ್ಟ್ ಅಂದರೆ ದೇವರು’ ಎಂದು ಆಗೀಗ ಹೇಳುತ್ತಿರುತ್ತಾಳೆ ರೇಖಾ. ಅದೇನೇ ಇದ್ದರೂ ಅಭಿನೇತ್ರಿ ರೇಖಾಳ ನಟನೆಯಲ್ಲಿನ ಆ ತನ್ಮಯತೆ ಈಗಿನ ನಟಿಯರಿಗೆ ಮಾದರಿಯಾಗಬೇಕಿದೆ.