ಮೋದಿ ಯೋಜನೆಗೆ ಕಂಟಕವಾಗುತ್ತಿರುವ ಚೀನಾ ಉತ್ಪನ್ನಗಳು

ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕ್ ಇನ್ ಇಂಡಿಯಾ ಸತತ ಹಿನ್ನಡೆ ಎದುರಿಸುತ್ತಿದೆ. ರಾಜಧಾನಿ ದೆಹಲಿಯ ಬಳಿ ಇರುವ ನೊಯಿಡಾದ ಅಂಗಡಿಗಳಲ್ಲಿ ದೀಪಾವಳಿಯ ಸಂದರ್ಭದಲ್ಲಿ ಜಗಮಗಿಸಿದ ಅಲಂಕಾರಿಕ ದೀಪಗಳು ಹೆಚ್ಚಾಗಿ ಚೀನಾ ಉತ್ಪನ್ನಗಳೇ ಆಗಿದ್ದು, ಅಗ್ಗದ ದರ ಇರುವುದರಿಂದ ಜನರನ್ನು ಆಕರ್ಷಿಸುತ್ತಿದೆ.

ಕಳೆದ ಒಂದು ವರ್ಷದಲ್ಲಿ ಭಾರತ ಚೀನಾ ವ್ಯಾಪಾರ ವಹಿವಾಟಿನಲ್ಲಿ ಭಾರತದ ವ್ಯಾಪಾರ ಕೊರತೆ 3 ಲಕ್ಷ 20 ಸಾವಿರ ಕೋಟಿ ರೂಗಳಷ್ಟಾಗಿದೆ. ಚೀನಾದ ಉತ್ಪಾದನಾ ಕ್ಷೇತ್ರ ಭಾರತದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಕಾಣುತ್ತಿರುವುದರಿಂದ ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಹಿನ್ನಡೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲೇ ಚೀನಾ ಉತ್ಪನ್ನಗಳ ವಿರುದ್ಧ ಜನಾಂದೋಲನ ತೀವ್ರವಾಗುತ್ತಿದೆ. ಅಕ್ಟೋಬರ್ 29ರಂದು ದೆಹಲಿಯಲ್ಲಿ ನಡೆದ ಸಮಾವೇಶದಲ್ಲಿ ಸ್ವದೇಶಿ ಜಾಗರಣ್ ಮಂಚ್ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಕ್ರೋಢೀಕರಿಸಿ ಚೀನಾ ಉತ್ಪನ್ನಗಳನ್ನು ನಿಷೇಧಿಸಲು ಕರೆ ನೀಡಿದೆ. ಚೀನಾ ಉತ್ಪನ್ನಗಳ ವಿರುದ್ಧದ ಹೋರಾಟದಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಭಾರತದ ಉತ್ಪಾದನಾ ಕ್ಷೇತ್ರದ ವ್ಯಾಪ್ತಿಯನ್ನು ಹಿಗ್ಗಿಸುವ ಮೋದಿ ಸರ್ಕಾರದ ಪ್ರಯತ್ನಗಳಿಗೆ ಚೀನಾದಿಂದ ಆಮದಾಗುತ್ತಿರುವ ಅಗ್ಗದ ವಸ್ತುಗಳು ಕಂಟಕಪ್ರಾಯವಾಗುತ್ತಿವೆ. ಆದರೆ ತನ್ನ ದೇಶದ ಉತ್ಪನ್ನಗಳನ್ನು ನಿಷೇಧಿಸುವುದರಿಂದ ಭಾರತಕ್ಕೇ ಹೆಚ್ಚು ನಷ್ಟವಾಗಲಿದೆ ಎಂದು ಚೀನಾ ಆರೋಪಿಸಿದೆ. ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ವಿದೇಶಿ ನೇರ ಬಂಡವಾಳದ ಪ್ರಮಾಣ 3 ಲಕ್ಷ 91 ಸಾವಿರ ಕೋಟಿ ರೂ.ಗಳಿಗೆ ಏರಿರುವುದು ಯೋಜನೆಯ ಯಶಸ್ಸಿನ ಸಂಕೇತವಾದರೂ ಚೀನಾದ ಅಗ್ಗದ ಬೆಲೆಯ ಉತ್ಪನ್ನಗಳ ಪೈಪೋಟಿಯನ್ನು ಎದುರಿಸಲು ಸಾಧ್ಯವಾಗದಿರುವುದು ಚಿಂತೆಗೀಡುಮಾಡುವ ವಿಷಯವಾಗಿದೆ.