ಭಾರತ ಜತೆ ಮೈತ್ರಿಗೆ ಚೀನಾ ಹೊಸ ಪ್ರಸ್ತಾವ

ನವದೆಹಲಿ : ಗೆಳೆತನ ಮತ್ತು ಸಹಕಾರದ ದ್ವಿಪಕ್ಷೀಯ ಮಾತುಕತೆ ಆರಂಭಿಸುವ ಚೀನಾದ ಪ್ರಸ್ತಾವದ ಬಗ್ಗೆ ಭಾರತ ಅತಿ ಎಚ್ಚರಿಕೆಯಿಂದ ನಡೆದುಕೊಳ್ಳಲು ತೀರ್ಮಾನಿಸಿದೆ.
ಬೀಜಿಂಗಿನಿಂದ ಬಂದಿರುವ ಹೊಸ ಪ್ರಸ್ತಾವದ ಬಗ್ಗೆ ನವದೆಹಲಿ ಅಚ್ಚರಿಗೊಂಡಿದೆ. ಚೀನಾವು ಭಾರತದೊಂದಿಗೆ ಗೆಳೆತನ, ಸಹಕಾರವಲ್ಲದೆ ಮುಕ್ತ ವ್ಯಾಪಾರ ಒಪ್ಪಂದ ಮತ್ತು ಬಹುಕಾಲದಿಂದ ನೆನೆಗುದಿಗೆ ಬಿದ್ದಿರುವ ಗಡಿ ವಿವಾದದ ಕುರಿತಾಗಿಯೂ ಪ್ರಸ್ತಾವಿಸಿದೆ.
ಚೀನಾ ಮತ್ತು ಭಾರತದ ಮಧ್ಯೆ ರಸ್ತೆ ಆರಂಭಿಸುವ ವಿಷಯ ಮತ್ತು ಭಾರತದ ಪೂರ್ವ ನೀತಿ-ಕಾಯ್ದೆ ವಿಷಯದಲ್ಲೂ ಮಾತುಕತೆಗೆ ಚೀನಾ ಬಯಸಿದೆ.
ಕೆಲವು ತಿಂಗಳಿಂದ ಎರಡು ನೆರೆ ರಾಷ್ಟ್ರಗಳ ಸಂಬಂಧ ಕುಸಿದಿದೆ. ಈ ಹಿನ್ನೆಲೆಯಲ್ಲಿ ಚೀನಾ ಈ ಪ್ರಸ್ತಾವ ಮುಂದಿಟ್ಟಿದೆ ಎನ್ನಲಾಗಿದೆ.
ಭಾರತವು ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಸೇರಿಕೊಳ್ಳುವುದಕ್ಕೆ ಹಾಗೂ ಪಾಕಿಸ್ತಾನದಲ್ಲಿ ನೆಲಯೂರಿರುವ ಭಯೋತ್ಪಾದಕ ಮಸೂದ್ ಅಜರ್ ವಿರುದ್ಧ ಅಂತಾರಾಷ್ಟ್ರೀಯ ಭಯೋತ್ಪಾದಕ ಹಣೆಪಟ್ಟಿ ಕಟ್ಟುವ ಯತ್ನಕ್ಕೆ ಚೀನಾ ಪ್ರತಿ ಬಾರಿಯೂ ಅಡ್ಡಗಾಲಿಡುತ್ತ ಬಂದಿದೆ.