ಮಸೂದ್ ಭಯೋತ್ಪಾದಕ ಎಂದು ಚೀನಾ ಒಪ್ಪಬೇಕು

ಮಸೂದ್ ಅಜರ್, ಮಾವೋ ಸೆವಿ

ಭಾರತದಲ್ಲಿ ಮಾಜಿ ಚೀನಾ ರಾಯಭಾರಿ ಅಭಿಮತ

ಭಾರತದಲ್ಲಿ ಒಂದು ಅವಧಿಯ ಕಾಲ ಕಾರ್ಯ ನಿರ್ವಹಿಸಿದ್ದ  ಮಾಜಿ ರಾಯಭಾರಿ ಭಾರತದ ಪರವಾಗಿ ದನಿ ಎತ್ತಿದ್ದು ಕುಖ್ಯಾತ ಭಯೋತ್ಪಾದಕ  ಜೈಷ್ ಎ ಮೊಹಮ್ಮದ್ ಸಂಘಟನೆಯ ಮಸೂದ್ ಅಜರನನ್ನು ವಿಶ್ವಸಂಸ್ಥೆಯಲ್ಲಿ ಭಯೋತ್ಪಾದಕ ಎಂದು ಘೋಷಿಸುವ ಭಾರತದ ಪ್ರಯತ್ನಕ್ಕೆ ಚೀನಾ ಬೆಂಬಲಿಸಬೇಕು ಎಂದು ಹೇಳಿದ್ದಾರೆ.

ಸಾಮಾಜಿಕ ತಾಣ `ವಿ ಚಾಟ್’ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮಾವೊ ಸೆವಿ ಅವರು, ಅಜರ್ ಮಸೂದ್ ವಿರುದ್ಧ ಭಾರತ ಸಲ್ಲಿಸಿರುವ ದೂರನ್ನು ಚೀನಾ ತನ್ನ ಲಾಭಕ್ಕಾಗಿ ಬಳಸಿಕೊಂಡು ಎರಡೂ ರಾಷ್ಟ್ರಗಳ ನಡುವೆ ಇರುವ ಗಂಭೀರ ರಾಜತಾಂತ್ರಿಕ ಸಂಬಂಧಗಳ ಬಿಕ್ಕಟ್ಟನ್ನು ತಿಳಿಗೊಳಿಸುವಂತೆ ಆಗ್ರಹಿಸಿದ್ದಾರೆ.

ಭಾರತದ ಅರ್ಜಿಯ ಮೇಲೆ ತನ್ನ ನಿಯಂತ್ರಣವನ್ನು ಸಡಿಲಗೊಳಿಸಲು ಚೀನಾ ನಿರಾಕರಿಸಿದ ಹಿನ್ನೆಲೆಯಲ್ಲೇ ಮಾವೋ ಸೆವಿ ತಮ್ಮ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು ಪಾಕಿಸ್ತಾನದಲ್ಲಿ ನೆಲೆ ಮಾಡಿರುವ ಲಷ್ಕರ್ ಇ ತೊಯಿಬಾ ಮತ್ತು ಜೈಷ್ ಎ ಮೊಹಮ್ಮದ್ ಸಂಘಟನೆಗಳು ಭಾರತ ಮತ್ತಿತರ ದೇಶಗಳಲ್ಲಿ ತಮ್ಮ ಭಯೋತ್ಪಾದಕ ಕೃತ್ಯಗಳಿಂದ ಅಪಾರ ಜನರ ಜೀವಹಾನಿಗೆ ಕಾರಣವಾಗಿವೆ ಎಂದು ಆರೋಪಿಸಿದ್ದಾರೆ.

ಪಠಾಣಕೋಟ್ ದಾಳಿಯಲ್ಲಿ ಅಜರ್ ಮಸೂದ್ ಕೈವಾಡ ಇರುವುದನ್ನು ಕುರಿತು ಭಾರತ ಸರ್ಕಾರ ಸಾಕಷ್ಟು ಪುರಾವೆ ಸಾಕ್ಷಿ ಒದಗಿಸಿರುವುದನ್ನು  ಪ್ರಸ್ತಾಪಿಸಿರುವ ಮಾವೋ ಸೆವಿ, ಫೇಸ್ಬುಕ್ ಪೋಸ್ಟಿಂಗ್, ಡಿಎನ್‍ಎ ಸ್ಯಾಂಪಲ್ಸ್ ಮತ್ತು ವಾಕಿ ಟಾಕಿಗಳನ್ನು ಭಾರತ ಸರ್ಕಾರ ವಶಪಡಿಸಿಕೊಂಡಿರುವುದನ್ನು ಉಲ್ಲೇಖಿಸಿದ್ದಾರೆ.

ಈ ಸಾಕ್ಷ್ಯ ಪುರಾವೆಗಳ ಹಿನ್ನೆಲೆಯಲ್ಲಿ ಚೀನಾ ಭಾರತದ ದೂರನ್ನು ಗಂಭೀರವಾಗಿ ಪರಿಗಣಿಸಿ, ಪರಿಸ್ಥಿತಿಯನ್ನು ಅಧ್ಯಯನ ಮಾಡಿ ತನ್ನ ನಿಲುವನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮಾವೋ ಸೆವಿ ಅವರ ಅಭಿಪ್ರಾಯವನ್ನು ಚೀನಾ ಸರ್ಕಾರ ನಿರ್ಲಕ್ಷಿಸಿದ್ದರೂ ಅಲ್ಲಿನ ರಾಜತಾಂತ್ರಿಕ ವಲಯದಲ್ಲಿ ಈ ಪ್ರತಿರೋಧದ ದನಿ ಸಂಚಲನ ಮೂಡಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಅರ್ಜಿಯನ್ನು ತಡೆಗಟ್ಟುವ ಮೂಲಕ ಚೀನಾ ಸರ್ಕಾರ ಒಂದು ಪ್ರಬುದ್ಧ ನಿಲುವು ವ್ಯಕ್ತಪಡಿಸಿದೆ ಎಂದು ಚೀನಾದ ಸರ್ಕಾರಿ ವಲಯಗಳು ಹೇಳುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಹದಗೆಡುತ್ತಿರುವ ಭಾರತ-ಚೀನಾ ಸಂಬಂಧಗಳು ಆತಂಕ ಸೃಷ್ಟಿಸಿದೆ.

ಅಜರ್ ಮಸೂದ್ ಕುರಿತಂತೆ ಭಾರತದ ವಿದೇಶಾಂಗ ರಾಜ್ಯ ಸಚಿವ ಎಂ ಜೆ ಅಕ್ಬರ್ ಅವರ ಹೇಳಿಕೆಗೆ ಪ್ರತಿಕ್ರಯಿಸಿರುವ ಚೀನಾದ ವಿದೇಶಾಂಗ ಸಚಿವರ ವಕ್ತಾರ ಗೆಂಗ್ ಶುವಾಂಗ್, ಚೀನಾ ಸರ್ಕಾರ ಈ ವಿಚಾರದಲ್ಲಿ ಸಾಕಷ್ಟು ಚಿಂತನೆ ನಡೆಸಿ ಒಂದು ಪ್ರಬುದ್ಧ ತೀರ್ಮಾನಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಮಾವೋ ಸೆವಿಯವರ ಈ ಭಿನ್ನ ದನಿ ಚೀನಾದಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವುದರ ಸಂಕೇತವಾಗಿದೆ.  ಭಾರತದ ಅರ್ಜಿಯ ಮೇಲೆ ಚೀನಾ ತನ್ನದೇ ಆದ ತಾಂತ್ರಿಕ ಹಿಡಿತ ಸಾಧಿಸಿರುವ ಹಿನ್ನೆಲೆಯಲ್ಲಿ ಅಜರ್ ಮಸೂದಗೆ ಶಿಕ್ಷೆ ನೀಡುವ ವಿಚಾರದಲ್ಲಿ ಚೀನಾ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಡುತ್ತಿದೆ.

ಮಾವೋ ಸೆವಿ 2007ರಿಂದ  2010ರ ಅವಧಿಯಲ್ಲಿ ಕೊಲ್ಕತ್ತಾದ ಚೀನಾ ಕೊನ್ಸುಲೇಟಿನಲ್ಲಿ ರಾಯಭಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ತಮ್ಮ ಬ್ಲಾಗಿನಲ್ಲಿ ಮಾವೋಸೆವಿ ಪಠಾಣಕೋಟ್ ದಾಳಿಯ ಸಂದರ್ಭಕ್ಕೆ ತನ್ನದೇ ಆದ ವಿಶೇಷ ಅರ್ಥವಿದೆ ಎಂದು ಹೇಳಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹುಟ್ಟುಹಬ್ಬಕ್ಕೆ ಶುಭಾಷಯ ಕೋರಲು ಪಾಕಿಸ್ತಾನಕ್ಕೆ ಹಠಾತ್ ಭೇಟಿನೀಡಿದ್ದ ಪ್ರಧಾನಿ ಮೋದಿಯ ಔಪಚಾರಿಕ ಶುಭಾಶಯಗಳ ಹಿನ್ನೆಲೆಯಲ್ಲೇ ಈ ದಾಳಿ ಸಂಭವಿಸಿದೆ. ಹಾಗಾಗಿ ಅಜರನ ಇತಿಹಾಸವನ್ನು ಪರಿಗಣಿಸಿ ಚೀನಾ ಸರ್ಕಾರ ಭಾರತದ ಅರ್ಜಿಗೆ ತಡೆಯೊಡ್ಡುವ ತನ್ನ ನೀತಿಯನ್ನು ಬದಲಿಸಬೇಕು ಎಂದು ಮಾವೋ ಹೇಳಿದ್ದಾರೆ.