ಚೀನಾದಲ್ಲಿ 2 ಲಕ್ಷ ಭ್ರಷ್ಟ ಕಮ್ಯುನಿಸ್ಟ್ ಸದಸ್ಯರಿಗೆ ಶಿಕ್ಷೆ

 ಬೀಜಿಂಗ್ : ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಇದರ  ಒಟ್ಟು 1,96,947 ಮಂದಿ ಸದಸ್ಯರನ್ನು 2013ರಿಂದ ಇಲ್ಲಿಯವರೆಗೆ ಭ್ರಷ್ಟಾಚಾರಕ್ಕಾಗಿ ಶಿಕ್ಷಿಸಲಾಗಿದೆಯೆಂದು ದೇಶದ ಅಧಿಕೃತ ಸುದ್ದಿ ಮಾಧ್ಯಮ ತಿಳಿಸಿದೆ.  ಸÀರಕಾರಿ ಸಂಪನ್ಮೂಲವನ್ನು ಅಬ್ಬರದ ಊಟಕ್ಕೆ, ಮದ್ಯಪಾನಕ್ಕಾಗಿ ಹಾಗೂ ಸರಕಾರಿ ವಾಹನಗಳನ್ನು ಖಾಸಗಿ ಉದ್ದೇಶಗಳಿಗಾಗಿ ಉಪಯೋಗಿಸಿದ  ಆರೋಪಗಳು ಈ ಸದಸ್ಯರುಗಳ ಮೇಲಿದೆ. ಅದ್ದೂರಿ ವಿವಾಹಗಳನ್ನು, ದುಂದುವೆಚ್ಚದಲ್ಲಿ ಅಂತ್ಯಕ್ರಿಯೆಗಳನ್ನು ಹಾಗೂ ದುಬಾರಿ ಉಡುಗೊರೆಗಳನ್ನು ನೀಡಿದ ಪಕ್ಷ ಸದಸ್ಯರಿಗೂ ಶಿಕ್ಷೆ ವಿಧಿಸಲಾಗಿದೆ.

ಸದಸ್ಯರ ಮೇಲೆ ಒಟ್ಟು  1,46,400ಕ್ಕೂ ಹೆಚ್ಚು ಪ್ರಕರಣಗಳಿದ್ದು  ಇವುಗಳಲ್ಲಿ ಶೇ 25ರಷ್ಟು ಮಂದಿ ಸಾರ್ವಜನಿಕ ವಾಹನಗಳನ್ನು ಖಾಸಗಿ ಉದ್ದೇಶಕ್ಕೆ ಬಳಸಿದ್ದರು ಅಥವಾ ಸರಕಾರಿ ನಿಧಿಗಳನ್ನು ಊಟ ಹಾಗೂ ಮದ್ಯಪಾನಕ್ಕೆ ದುರುಪಯೋಗಪಡಿಸಿದ್ದರು ಎಂದು ಪಕ್ಷದ ಕೇಂದ್ರ ಶಿಸ್ತು ಪರಿಪಾಲನಾ ಆಯೋಗ ಹೇಳಿದೆಯೆಂದು ಅಧಿಕೃತ ಸುದ್ದಿ ಸಂಸ್ಥೆ ಷಿನುವಾ ತಿಳಿಸಿದೆ.

ನಾಯಕರು ತಮ್ಮ ಅಧಿಕೃತ ಭೇಟಿಗಳ ಸಂದರ್ಭ  ಸ್ವಾಗತ ಕೋರುವ ಬ್ಯಾನರುಗಳಿಗೆ ಹಾಗೂ ಹೂವುಗಳಿಗೆ ವೆಚ್ಚ ಮಾಡಬಾರದು, ಅದ್ದೂರಿ ಸತ್ಕಾರ ಕೂಟಗಳನ್ನು ಆಯೋಜಿಸಬಾರದು ಹಾಗೂ ಅವರು ಪ್ರಯಾಣಿಸುವೆಡೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯುಂಟು ಮಾಡುವಂತಹ  ಅನಗತ್ಯ ಸಾರಿಗೆ ನಿರ್ಬಂಧಗಳನ್ನು ವಿಧಿಸಬಾರದು ಎಂದು ಇಲ್ಲಿನ ಕೆಲವೊಂದು ನಿಯಮಗಳು ಸೂಚಿಸುತ್ತವೆ.

ಪಕ್ಷದಲ್ಲಿ ಒಟ್ಟು 8.8 ಕೋಟಿಗೂ ಅಧಿಕ ಸದಸ್ಯರಿರುವುದರಿಂದ ನಿಯಮಗಳನ್ನು ಜಾರಿಗೊಳಿಸುವ ಕಾರ್ಯ ಕಠಿಣವಾಗಿದೆಯೆಂದು ಹೇಳಲಾಗುತ್ತಿದೆ.