ಮುಸ್ಲಿಮರ ಡಿಎನ್ಎ ಪರೀಕ್ಷೆಗೆ ಉಪಕರಣ ಖರೀದಿಸಿದ ಚೀನಾ

 ಬೀಜಿಂಗ್ : ಮುಸ್ಲಿಂ ಬಾಹುಳ್ಯ ಪ್ರದೇಶವಾದ ಪಶ್ಚಿಮ ಚೀನಾದ ಕ್ಸಿಂಜಿಯಾಂಗ್ ಪ್ರಾಂತ್ಯದಲ್ಲಿ ಸರಕಾರ ಭಯೋತ್ಪಾದನೆ ಮುಂತಾದ ಚಟುವಟಿಕೆಗಳ ನಿಯಂತ್ರಣದ ನೆಪದಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವಂತೆಯೇ ಇದೀಗ  ಅಲ್ಲಿನ ಸಾವಿರಾರು ಜನರ ಡಿಎನ್‍ಎ ಮಾದರಿಗಳನ್ನು ಸಂಗ್ರಹಿಸುವ ಉದ್ದೇಶದಿಂದ 87 ಲಕ್ಷ ಡಾಲರ್ ಮೌಲ್ಯದ ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ.

ಚೀನಾ ಸುಮಾರು 30 ಲಕ್ಷ ಡಾಲರ್ ಮೌಲ್ಯದ ಹೆಚ್ಚುವರಿ ಡಿಎನ್‍ಎ ಮಾದರಿ ಸಂಗ್ರಹಿಸುವ ಉಪಕರಣಗಳನ್ನು ಖರೀದಿಸಿರುವ ಬಗ್ಗೆ ತನ್ನಲ್ಲಿ ಪುರಾವೆಯಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಹೆÉೀಳುತ್ತಿದೆ. ಪಾಸ್ಪೋರ್ಟ್ ಪಡೆಯಲು ಹಾಗೂ ವಿದೇಶಗಳಿಗೆ ಪ್ರಯಾಣಿಸಲು ಈ ಪ್ರದೇಶದ  ನಿವಾಸಿಗಳು ತಮ್ಮ ಡಿಎನ್‍ಎ ಮಾದರಿ, ಬೆರಳಚ್ಚು ಹಾಗೂ ಧ್ವನಿ ಮಾದರಿಯನ್ನು ನೀಡುವ ನಿಯಮವನ್ನು ಕಳೆದ ವರ್ಷವಷ್ಟೇ ಜಾರಿಗೊಳಿಸಲಾಗಿತ್ತು.

ಇದೀಗ ಸರಕಾರ ಖರೀದಿಸಲುದ್ದೇಶಿಸಿರುವ ಡಿಎನ್‍ಎ ಉಪಕರಣದಿಂದ ದಿನವೊಂದಕ್ಕೆ 10,000 ಡಿಎನ್‍ಎ ಮಾದರಿಗಳನ್ನು ಸಂಗ್ರಹಿಸಬಹುದಾಗಿದೆ. ಜನರ ಡಿಎನ್‍ಎ ಪ್ರೊಫೈಲುಗಳನ್ನು 1989ರಿಂದ ಚೀನಾ ಸಂಗ್ರಹಿಸುತ್ತಿದ್ದು ಇಲ್ಲಿಯ ತನಕ 4 ಕೋಟಿಗೂ ಹೆಚ್ಚು ಜನರ ಬಗ್ಗೆ ಮಾಹಿತಿ ಹೊಂದಿ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಡಿಎನ್‍ಎ ಡಾಟಾಬೇಸ್ ಹೊಂದಿದೆ.