ಭಾರತದ ನಿರ್ಲಕ್ಷ್ಯ ಚೀನಾಕ್ಕೆ ಲಾಭ

ತನ್ನ ಭರವಸೆಗಳನ್ನು ಪೂರೈಸಲಾಗದ ಭಾರತದ ನಿಷ್ಕ್ರಿಯತೆ ಚೀನಾಕ್ಕೆ ಅವಕಾಶಗಳ ಹೆಬ್ಬಾಗಿಲು ತೆರೆಯುತ್ತಿದೆ.

  • ಟಿ ಜೆ ಎಸ್ ಜಾರ್ಜ್

ಭಾರತದ ನೆರೆಹೊರೆಯ ಪ್ರದೇಶಗಳಲ್ಲಿ ತನ್ನದೇ ಆದ ತಂತ್ರಗಾರಿಕೆಯನ್ನು ಅನುಸರಿಸುತ್ತಿರುವ ಚೀನಾ ಕ್ರಮೇಣ ತನ್ನ ನೆಲೆಯನ್ನು ಗಟ್ಟಿಗೊಳಿಸುತ್ತಿದೆ. ಅಂತರಿಕ ಸಮಸ್ಯೆಗಳಿಂದಲೇ ಬಳಲುತ್ತಿರುವ ಭಾರತ ಸರ್ಕಾರ ವಿದೇಶಾಂಗ ವಲಯದಲ್ಲಿ ಎದುರಿಸುತ್ತಿರುವ  ಜ್ವಲಂತ ಸಮಸ್ಯೆಗಳು ಸಾರ್ವಜನಿಕವಾಗಿ ಚರ್ಚೆಯಾಗುತ್ತಿಲ್ಲ. ಇದರಿಂದ ಭಾರತದ ರಾಜತಾಂತ್ರಿಕ ವೈಫಲ್ಯವೂ ಎದ್ದುಕಾಣುವಂತಿದೆ. ಮಂಗೋಲಿಯಾದಲ್ಲಿ ಭಾರತ ಎದುರಿಸಿದ ಗೊಂದಲಮಯ ಸನ್ನಿವೇಶ, ನೇಪಾಲಿ ಜನತೆಯಿಂದ ದೂರವಾದ ಪ್ರಸಂಗ ಮತ್ತು ಇರಾನಿನಲ್ಲಿ ಕಳೆದುಕೊಂಡ ಅವಕಾಶಗಳು ಭಾರತ ಸ್ಥಿತಿಗೆ ಕನ್ನಡಿ ಹಿಡಿದಂತಿದೆ.

ಭಾರತದೊಡನೆ ಅಷ್ಟೇನೂ ಸ್ನೇಹ ಬಾಂಧವ್ಯ ಹೊಂದಿಲ್ಲದ ಚೀನಾಗೆ ದಿಟ್ಟ ಸಂದೇಶವನ್ನು ಕಳುಹಿಸಿದ ನರೇಂದ್ರ ಮೋದಿಯ ನಡೆ ಶ್ಲಾಘನೀಯ. ಮಂಗೋಲಿಯಾಗೆ ನೀಡಿದ ಭೇಟಿ ಮತ್ತು ಮುಂಗೋಲಿಯಾ ದಲೈಲಾಮಾ ಅವರನ್ನು ಆಹ್ವಾನಿಸಿರುವುದು ಈ ನಿಟ್ಟಿನಲ್ಲಿ ಸ್ವಾಗತಾರ್ಹವೂ ಹೌದು. ಭಾರತ ಸರ್ಕಾರದ ಈ ನಿಲುವಿನಿಂದ ಆಕ್ರೋಶಗೊಂಡ ಚೀನಾ ಸರ್ಕಾರ ಮಂಗೋಲಿಯಾ ಭೇಟಿ ಮತ್ತು ದಲೈಲಾಮಾ ಅವರ ಭೇಟಿಯ ಪರಿಣಾಮವಾಗಿ ಮಂಗೋಲಿಯಾಗೆ ಸಂಚಾರ ಸಂಪರ್ಕವನ್ನು ರದ್ದುಪಡಿಸಿದೆ. ರಷ್ಯಾ ಮತ್ತು ಚೀನಾದ ನಡುವೆ ಇರುವ ಬೆಟ್ಟಗುಡ್ಡಗಳಿಂದ ಕೂಡಿದ ಮಂಗೋಲಿಯಾ ಚೀನಾದ ಮೂಲಕವೇ ತನ್ನ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುವುದರಿಂದ  ಚೀನಾದ ತೀರ್ಮಾನದಿಂದ ಗೊಂದಲಕ್ಕೀಡಾಗಿದೆ.

ಕೂಡಲೇ ಭಾರತದ ನೆರವು ಕೋರಿದ ಮಂಗೋಲಿಯ ಮೋದಿ ತಮ್ಮ ಭೇಟಿಯ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಯಂತೆ ಒಂದು ಶತಕೋಟಿ ಡಾಲರ್ ನೆರವು ಕೋರಿದೆ. ಆದರೆ ಭಾರತದ ವಿದೇಶಾಂಗ ಸಚಿವಾಲಯ ತನ್ನ ಪ್ರತಿಕ್ರಿಯೆಯಲ್ಲಿ, ಈ ಕುರಿತು ಭಾರತ ಸರ್ಕಾರ ಸಾಲದ ಮಾರ್ಗವನ್ನು ಜಾರಿಗೊಳಿಸುವ ಯೋಜನೆ ಸಿದ್ಧಪಡಿಸುತ್ತಿದೆ ಎಂದು ಹೇಳಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ವಿಚಲಿತಗೊಂಡ ಮಂಗೋಲಿಯಾ ಕೂಡಲೇ ಚೀನಾದ ಕ್ಷಮೆ ಕೋರಿ ಇನ್ನು ಎಂದಿಗೂ ದಲೈಲಾಮಾಗೆ ದೇಶದಲ್ಲಿ ಪ್ರವೇಶ ನೀಡುವುದಿಲ್ಲ ಎಂದು ಭರವಸೆ ನೀಡಿದೆ. ಕೂಡಲೇ ಚೀನಾ ಮಂಗೋಲಿಯಾಗೆ 4.2 ಶತಕೋಟಿ ಡಾಲರ್ ನೆರವು ನೀಡಿದೆ.

ಇದಕ್ಕೂ ಮುನ್ನ 2015ರಲ್ಲೇ ಭಾರತ ಸರ್ಕಾರ ನೇಪಾಲದ ವಿರುದ್ಧ ದಿಗ್ಬಂಧನ ಹೇರಿತ್ತು. ನೇಪಾಲದ ಸಾರ್ವಭೌಮತ್ವಕ್ಕೆ ನೆಹರೂ ಕಾಲದಿಂದಲೂ ಭಾರತ ಸರ್ಕಾರ ಮನ್ನಣೆ ನೀಡಿಲ್ಲ.  ನೇಪಾಲ ಪ್ರಜಾತಂತ್ರ ರಾಷ್ಟ್ರವಾದ ನಂತರವಾದರೂ ಭಾರತ ತನ್ನ ಧೋರಣೆಯನ್ನು ಬದಲಿಸಬಹುದಿತ್ತು. ಆದರೆ ಹಾಗಾಗಲಿಲ್ಲ. ಮಾದೇಶಿ ಸಮುದಾಯದ ಜನತೆ ತಮ್ಮದೇ ಆದ ವಿಶಿಷ್ಟ ಸ್ಥಾನಮಾನಗಳಿಗಾಗಿ ಹೋರಾಡುವ ಸಂದರ್ಭದಲ್ಲಿ ಭಾರತದೊಡನೆ ಸಂಪರ್ಕವನ್ನೇ ಕಡಿತಗೊಳಿಸಿದರೂ ಭಾರತ ನಿಷ್ಕ್ರಿಯವಾಗಿತ್ತು.

ಅದರೆ ಈ ವಿಚಾರದಲ್ಲಿ ಚೀನಾ ಕೂಡಲೇ ಪ್ರತಿಕ್ರಿಯಿಸಿತ್ತು. ಭಾರತದ ದಿಗ್ಬಂಧನದ ಒಂದೇ ತಿಂಗಳ ಅವಧಿಯಲ್ಲಿ ನೇಪಾಲಕ್ಕೆ 1.3 ದಶಲಕ್ಷ ಲೀಟರ್ ಪೆಟ್ರೋಲ್ ಸರಬರಾಜು ಮಾಡಿತ್ತು. ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಭಾರತವನ್ನು ಹೊರತುಪಡಿಸಿ ಅನ್ಯದೇಶವೊಂದು ನೇಪಾಲಕ್ಕೆ ಇಂಧನ ಪೂರೈಸಿತ್ತು. ಚೀನಾ ನೇಪಾಲಕ್ಕೆ ತನ್ನ ಬಂದರುಗಳನ್ನು ರಫ್ತು ವ್ಯಾಪಾರಕ್ಕಾಗಿ ಮುಕ್ತಗೊಳಿಸಿತ್ತು, ಮುಕ್ತ ವ್ಯಾಪಾರ ಒಡಂಬಡಿಕೆಗೆ ಸಹಿ ಮಾಡಿತ್ತು ಮತ್ತು ನೇಪಾಲದ ಪದಾರ್ಥಗಳಿಗೆ ಸುಂಕವಿಲ್ಲದೆ ಪ್ರವೇಶ ನೀಡಿತ್ತು.

ಇರಾನ್ ಜೊತೆಗಿನ ಸಂಬಂಧಗಳನ್ನು ನಿರ್ವಹಿಸುವುದರಲ್ಲೂ ಅಮೆರಿಕದ ಸಾಮ್ರಾಜ್ಯಶಾಹಿ ಧೋರಣೆಗೆ ಬಲಿಯಾಗಿ ಭಾರತ ತಪ್ಪು ಹಾದಿ ಹಿಡಿದಿತ್ತು. ಇರಾನಿನಲ್ಲಿ  150 ದಶಲಕ್ಷ ಡಾಲರ್ ವೆಚ್ಚದ ಚಬಹರ್ ಯೋಜನೆಗೆ ಭಾರತ ನೆರವು ನೀಡಿದ್ದರೂ ಈವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಏತನ್ಮಧ್ಯೆ ಬಲೂಚಿಸ್ಥಾನದಲ್ಲಿ ಚೀನಾ ಗ್ವಾದಾರ್ ಬಂದರಿಗೆ ಚಾಲನೆ ನೀಡಿರುವುದೇ ಅಲ್ಲದೆ ಇರಾನಿನಲ್ಲೂ ಸಹ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ತನ್ನ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಉಕ್ಕು ಗಿರಣಿ ಮತ್ತು ಮೆಟ್ರೋ ರೈಲು ನಿರ್ಮಾಣಕ್ಕೆ ಮುಂದಾಗಿದೆ. ಭಾರತ ಮಂಕಾಗಿದೆ.