ನ 20ರ ವರೆಗೆ ಜಿಲ್ಲಾದ್ಯಂತ ಚೈಲ್ಡ್ ಲೈನ್ ಸೆ ದೋಸ್ತಿ

 ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನವೆಂಬರ್ 14ರಿಂದ 20ರ ವರೆಗೆ ಚೈಲ್ಡ್ ಲೈನ್ ಸೆ ದೋಸ್ತಿ ಎಂಬ ಜಾಗೃತಿ ಕಾರ್ಯಕ್ರಮವನ್ನು ಚೈಲ್ಡ್ ಲೈನ್ ಹೆಲ್ಪೈನ್ ಆಯೋಜಿಸಿದೆ.

ಕಾರ್ಯಕ್ರಮವು ನವೆಂಬರ್ 14ರಂದು ಕದ್ರಿ ಬಾಲಭವನದಲ್ಲಿ ಉದ್ಘಾಟನೆಗೊಂಡಿದ್ದು, ನವೆಂಬರ್ 20ರ ವರೆಗೆ ನಡೆಯಲಿದೆ. ನವೆಂಬರ್ 15ರಂದು ಆನ್ಲೈನ್ ಸುರಕ್ಷತೆ ಮತ್ತು ಮಾದಕ ವಸ್ತುಗಳ ಕೆಟ್ಟ ಪರಿಣಾಮಗಳು ಎಂಬ ವಿಷಯದಲ್ಲಿ ಕಾರ್ಯಾಗಾರ ನಡೆಯಲಿದೆ. ಈ ವಿಷಯದಲ್ಲಿ ಅರಿವು ಮೂಡಿಸುವ ಜಾಥಾವೊಂದು ನವೆಂಬರ್ 16ರಂದು ನಡೆಯಲಿದೆ.

ಬಾಲ್ಯವಿವಾಹ, ಭಿಕ್ಷಾಟನೆ ಮತ್ತು ಬಾಲಕಾರ್ಮಿಕರು ವಿಷಯದಲ್ಲಿ ಜಾಗೃತಿ ಕಾರ್ಯಕ್ರಮಗಳು ಕೇಂದ್ರ ಮಾರುಕಟ್ಟೆ, ಲಾಲಬಾಗ್, ಬಂದರು ಮತ್ತು ಕದ್ರಿ ಪಾರ್ಕುಗಳಲ್ಲಿ ನಡೆಯಲಿದೆ. ಕರಪತ್ರಗಳನ್ನು ಹೊಟೇಲುಗಳು, ಗ್ಯಾರೇಜುಗಳು, ರಿಕ್ಷಾ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ವಿತರಿಸಲಾಗುವುದು.

“ಬೆಂಗಳೂರಿನ ಓಯಸಿಸ್ ಮಕ್ಕಳ ಸ್ನೆಹಿ ಶಾಲೆ ಬಾಲ್ಯವಿವಾಹ ಮುಕ್ತ ಗ್ರಾಮಗಳು ಎಂಬ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬೀದಿನಾಟಕ ಪ್ರದರ್ಶಿಸಲಿದೆ ಮತ್ತು ಬೈಕ್ ರ್ಯಾಲಿ ನಡೆಸಲಿದೆ. ಮಕ್ಕಳ ಲೈಂಗಿಕ ದೌರ್ಜನ್ಯ ವಿಷಯದಲ್ಲಿ ಜಾಗೃತಿ ಕಾರ್ಯಕ್ರಮ ನವೆಂಬರ್ 19ರಂದು ನಡೆಯಲಿದೆ.

ನವೆಂಬರ್ 20ರಂದು ಭಿನ್ನಚೇತನರಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರಿನ ಚೈಲ್ಡ್ ಲೈನ್ ಜನವರಿಯಿಂದ ಸೆಪ್ಟೆಂಬರ್ ತನಕ ಸುಮಾರು 2,639 ಕರೆಗಳನ್ನು ಸ್ವೀಕರಿಸಿದೆ. ಇದರಲ್ಲಿ ಸುಮಾರು 274 ಕರೆಗಳು ಭಿಕ್ಷಾಟನೆಗೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ್ದಾಗಿವೆ. ವೈದ್ಯಕೀಯ ಸಹಾಯ ಯಾಚಿಸಿ 7 ಕರೆಗಳು ಬಂದಿದ್ದವು” ಎಂದು ಚೈಲ್ಡ್ ಲೈನ್ ನಿರ್ದೇಶಕ ರೆನ್ನಿ ಡಿ’ಸೋಜ ತಿಳಿಸಿದ್ದಾರೆ.