ಚಾರ್ಮಾಡಿ : ನಿಲ್ಲಿಸಿದ್ದ ರಿಕ್ಷಾ ಚಲಿಸಿ ಮಗು ಸಾವು

ನಮ್ಮ ಪ್ರತಿನಿಧಿ ವರದಿ

 ಬೆಳ್ತಂಗಡಿ : ಮಗುವನ್ನು ರಿಕ್ಷಾದಲ್ಲಿ ಕೂರಿಸಿ ಚಾಲಕ ನಿಲ್ಲಿಸಿ ಹೋಗಿದ್ದ ರಿಕ್ಷಾವೊಂದು ಆಕಸ್ಮಿಕವಾಗಿ ಮುಂದೆ ಚಲಿಸಿದ ಪರಿಣಾಮ ಶನಿವಾರ ಚಾರ್ಮಾಡಿಯಲ್ಲಿ ಚಾಲಕನ ಮಗು ಬಾವಿಗೆ ಬಿದ್ದು ಮೃತಪಟ್ಟಿದೆ.

ಚಾರ್ಮಾಡಿ ಗ್ರಾಮದ ನಿವಾಸಿ ಖಲಂದರ್ ಎಂಬವರ ಪುತ್ರ ಖಲೀಲುದ್ದೀನ್ (3) ಮೃತಪಟ್ಟ ಬಾಲಕ.

ಚಾಲಕ ಖಲಂದರ್ ಅವರು ಚಾರ್ಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಂಗನವಾಡಿ ಕೇಂದ್ರದಿಂದ ಮಕ್ಕಳನ್ನು ಎಂದಿನಂತೆ ಕರೆದೊಯ್ಯಲು ಬಂದಿದ್ದರು. ಅವರು ರಿಕ್ಷಾವನ್ನು ನಿಲ್ಲಿಸಿ ಹೋಗಿದ್ದ ಸಂದರ್ಭ ಏಕಾಏಕಿ ರಿಕ್ಷಾ ಚಲಿಸಿ ಸುಮಾರು 20 ಅಡಿ ಆಳದ ಗುಂಡಿಗೆ ಬಿದ್ದು ರಿಕ್ಷಾ ಸಿಲುಕಿಕೊಂಡು ರಿಕ್ಷಾದಲ್ಲಿದ್ದ  ಮಗು ಗಂಭೀರ ಗಾಯಗೊಂಡು  ಸಾವನ್ನಪ್ಪಿದೆ.

ಅಂಗನವಾಡಿಯಿಂದ ಮಗನನ್ನು ಕರೆತಂದು ರಿಕ್ಷಾದಲ್ಲಿ ಕುಳ್ಳಿರಿಸಿ ಖಲಂದರ್ ಅವರು ನೆರೆಮನೆಯ ಮಕ್ಕಳಿದ್ದರೆ ಅವರನ್ನು ಕರೆದುಕೊಂಡು ಬರಲೆಂದು ಅಂಗನವಾಡಿಗೆ ಹೋಗಿದ್ದ ಸಂದರ್ಭ ರಿಕ್ಷಾ ಏಕಾಏಕಿ ಚಲಿಸಿ ಸಮೀಪವಿರುವ ಬಾವಿಯ ಬದಿಯಿರುವ ಗುಂಡಿಗೆ ಬಿದ್ದಿದೆ.  ಗಂಭೀರಗೊಂಡ ಮಗುವನ್ನು ಆಸ್ಪತ್ರೆ ಸಾಗಿಸುವ ವೇಳೆ ಮೃತಪಟ್ಟಿದೆ. ಚಾಲಕನ ನಿರ್ಲಕ್ಷ್ಯ ಘಟನೆಗೆ ಕಾರಣ ಎನ್ನಲಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹದಗೆಟ್ಟ ರಸ್ತೆ

ಘಟನೆಯ ಬೆನ್ನಲ್ಲೇ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಕಾರಣ ಅಂಗನವಾಡಿಗೆ ಹೋಗುವ ರಸ್ತೆ ಅಪಾಯಕಾರಿಯಾಗಿದ್ದು ಈ ರಸ್ತೆಯನ್ನು ದುರಸ್ತಿ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ತಿಂಗಳಲ್ಲಿ ಸರಿಪಡಿಸುವ ಭರವಸೆ ನೀಡಿದ್ದರು. ಒಂದು ವರ್ಷ ಕಳೆದರೂ ಇದುವರೆಗೆ ದುರಸ್ಥಿಗೊಳಿಸಿಲ್ಲ. ಅಂಗನವಾಡಿಗೆ ಹೋಗಬೇಕಾದರೂ ಈ ಕಿರಿದಾದ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಇದೀಗ ಘಟನೆ ನಡೆದ ಬಳಿಕ ಸಾರ್ವಜನಿಕರು ಆಕ್ರೋಶಗೊಂಡಿದ್ದು ತಕ್ಷಣ ಈ ರಸ್ತೆಯನ್ನು ದುರಸ್ತಿಗೊಳಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು  ಎಂದು ನಾಗರಿಕರು ಎಚ್ಚರಿಸಿದ್ದಾರೆ.