ಚಿಕ್ಕಮೇಳ ಹಣ ಕೀಳುವ ಹೊಸ ವರಸೆ

ಹಿಂದೆ ಮಳೆಗಾಲದಲ್ಲಿ ಯಕ್ಷಗಾನ ವೇಷ ಧರಿಸಿದ ಇಬ್ಬರೊಂದಿಗೆ ಹಿಮ್ಮೇಳದವರೂ ಸೇರಿರುವ ಚಿಕ್ಕ ತಂಡ, ರಾತ್ರಿ ಹೊತ್ತು ಮನೆ ಮನೆಗಳಿಗೆ ತೆರಳಿ ಪ್ರಸಂಗದ ಒಂದು ಭಾಗವನ್ನು ಆಡಿ ತೋರಿಸುವ ರೂಢಿ ಇತ್ತು. ಇದನ್ನು ಸಿರಿವೇಷ ಎಂದೋ ಚಿಕ್ಕ ಮೇಳ ಎಂದೋ ಕರೆಯಲಾಗುತ್ತಿತ್ತು. ಅನೇಕ ಮಂದಿ ಇದನ್ನು ಇಷ್ಟ ಪಡುತ್ತಿದ್ದ ಕಾರಣ ಈ ಚಿಕ್ಕ ಮೇಳ ರಾತ್ರಿ 12ಕ್ಕೆ ಬಂದರೂ ನಿದ್ದೆಯಿಂದ ಎದ್ದು ಸ್ವಾಗತಿಸುತ್ತಿದ್ದರು. ತಂಡ ನೀಡಿದ ಪ್ರದರ್ಶನ ನೋಡಿ ಆನಂದಿಸುತ್ತಿದ್ದರು. ಅವರು ನೀಡಿದ ಸಂಭಾವನೆಯಿಂದ ತೃಪ್ತರಾದ ತಂಡದವರು ಮುಂದಿನ ವರ್ಷವೂ ಇಷ್ಟಪಡುವವರ ಮನೆಗಳಿಗೆ ಮಾತ್ರ ಹೋಗುತ್ತಿತ್ತು ಇತ್ತೀಚೆಗಿನ ವರ್ಷಗಳಲ್ಲಿ ಮನೆ ಮನೆಗೆ ಬರುವ ಚಿಕ್ಕ ಮೇಳದ ರೀತಿ ನೀತಿ ಬದಲಾಗಿದೆ. ಒಂದು ದಿನ ಮೊದಲೇ ಮುದ್ರಿಸಿದ ಕರಪತ್ರ ನೀಡಿ ತಾವು ಬರುವುದಾಗಿ ತಿಳಿಸುತ್ತಾರೆ. ಆ ಹೊತ್ತಿಗೆ ಅಕ್ಕಿ, ಹಣ್ಣುಕಾಯಿ, ಹೂ, ಎಲೆಅಡಿಕೆ, ಸಾಧ್ಯವಿದ್ದರೆ ಹಣ್ಣು ಹಂಪಲು, ಕಾಣಿಕೆ ಎಲ್ಲವೂ ಇರಬೇಕೆಂದು ಹೇಳುತ್ತಾರೆ. ಯಕ್ಷಗಾನ ವೇಷಗಳು ಮನೆಯೊಳಗೆ ಕುಣಿದರೆ, ದುಷ್ಟ ಶಕ್ತಿಗಳು ಹೊರ ಹೋಗುತ್ತವೆ. ಇದು ವಾಸ್ತು ದೋಷ, ನಿವಾರಣೆ ಮಾಡುತ್ತದೆ ಎಂದು ಕರಪತ್ರದಲ್ಲಿ ಮುದ್ರಿಸಿರುತ್ತಾರೆ ಇದನ್ನು ನಿರಾಕರಿಸಿದರೆ ದೋಷ ಬರಬಹುದು, ದೇವರು ಮುನಿಯಬಹುದು ಎಂಬ ಆತಂಕದಿಂದ ಮನೆಯವರು ಈ ಕಾರ್ಯಕ್ರಮಕ್ಕೆ ಸಿದ್ಧರಾಗುತ್ತಾರೆ. ಹೂ ಹಣ್ಣು ಕಾಯಿ ಜೊತೆಗೆ ಸುಲಭದಲ್ಲಿ ಸಿಗದ ಎಲೆ ಅಡಿಕೆಗಾಗಿ ಎಲ್ಲೆಲ್ಲೋ ಸುತ್ತಾಡಿ ಹೊಂದಿಸುತ್ತಾರೆ ನಿಗದಿತ ದಿನದಂದು ಕಾದ ಮೇಲೆ ತಂಡದ ಒಬ್ಬ ದೇವರ ಭಾವಚಿತ್ರ ಮಂಟಪವನ್ನು ಮನೆಯೊಳಗೆ ತಂದು ದೀಪಹಚ್ಚಿ ಹಣ್ಣು ಕಾಯಿ ಮಾಡಿ ಬಳಿಕ ಪ್ರದರ್ಶನ ನಡೆಯುತ್ತದೆ ಇಲ್ಲಿ ಯಕ್ಷಗಾನದೊಂದಿಗೆ  ದೇವರನ್ನು ಜೋಡಿಸಿರುವ ಕಾರಣ ಮನೆಯವರು ಸ್ವಲ್ಪ ಹೆಚ್ಚೇ ಹಣ ನೀಡುತ್ತಾರೆ. ಕೆಲವೆಡೆ ಕನಿಷ್ಠ ಇಂತಿಷ್ಟಾದರೂ ನೀಡಬೇಕೆಂಬ ಸೂಚನೆಯನ್ನೂ ನೀಡಲಾಗುತ್ತದೆ ಇಷ್ಟಕ್ಕೂ ಪ್ರದರ್ಶನ ಹೇಗಿರುತ್ತದೆಂದರೆ ಅದು ಕೇವಲ ಕಾಟಾಚಾರದ ಪ್ರದರ್ಶನವಾಗಿರುತ್ತದೆ ಕೇವಲ ಎರಡೇ ಪದ್ಯಗಳಲ್ಲಿ ಎಲ್ಲವನ್ನೂ ಮುಗಿಸಿ ಹೋಗುತ್ತಾರೆ ಅದು ಕೂಡಾ ಕೆಲವೆಡೆ ನೀವು ನೀಡುವ ಸಂಭಾವನೆಯನ್ನು ಹೊಂದಿಕೊಂಡಿರುತ್ತದೆ ತಂಡ ಬರುವ ಮೊದಲು ಒಬ್ಬ ಬಂದು ಹಣ್ಣು ಕಾಯಿ ದೀಪ ಸಿದ್ಧವಾಗಿದೆಯೇ ಎಂದು ನೋಡುವ ನೆಪದಲ್ಲಿ ಅಲ್ಲಿ ಇಡಲಾಗಿರುವ ಸಂಭಾವನೆ ಎಷ್ಟೆಂದು ನೋಡುತ್ತಾನೆ ತಂಡಕ್ಕೆ ಅದನ್ನು ತಿಳಿಸಿದೊಡನೆ  ಸಂಭಾವನೆಗೆ ಅನುಗುಣವಾಗಿ ಪ್ರದರ್ಶನ ಗಿಡ್ಡ ಯಾ ಉದ್ದ ಆಗುತ್ತದೆ ಕೆಲವು ತಂಡ ಸಂಭಾವನೆಯೊಂದಿಗೆ ಅಲ್ಲಿರಿಸಿದ ಅಕ್ಕಿ ತೆಂಗಿನಕಾಯಿಗಳನ್ನು ಗೋಣಿಗಳಲ್ಲಿ ತುಂಬಿ ಸಾಗಿಸುವುದಿದೆ ಹಿಂದೆ ಚಿಕ್ಕಮೇಳ ತಂಡ ಬಂದಾಗ ಮನೆಯ ಹಾಲಿನ ಒಂದು ಬದಿ ನೆಲದಲ್ಲಿ ಹಿಮ್ಮೇಳದವರು ಕುಳಿತು ಪ್ರದರ್ಶನ ನೀಡುವಾಗ ಮನೆ ಮಂದಿ ಕುರ್ಚಿ ಬೆಂಚು ಸೋಪಾಗಳಲ್ಲಿ ಕುಳಿತು ನೋಡುತ್ತಿದ್ದರೆ  ಈಗ ಹಿಮ್ಮೇಳದವರು ನೇರ ಬಂದು ಸೋಪಾವನ್ನೇ ಆಕ್ರಮಿಸುತ್ತಾರೆ ಮನೆಯವರೆಲ್ಲ ಪ್ರದರ್ಶನವನ್ನು ನಿಂತೇ ನೋಡಬೇಕಷ್ಟೇ ದೇವರ ಮತ್ತು ದೇವಸ್ಥಾನದ ಹೆಸರು ಹೇಳಿ ಮನೆ ಮನೆಗೆ ದೇವರ ಚಿತ್ರ ತಂದು ಪೂಜೆಯ ನಾಟಕವಾಡಿ ಕಲೆಯನ್ನು ಕಡೆಗಣಿಸಿ ಹಣಗಳಿಕೆಯೇ ಮುಖ್ಯ ಉದ್ದೇಶವನ್ನಾಗಿರಿಸಿದ ಇಂತಹ ಚಿಕ್ಕಮೇಳ ತಂಡಗಳಿಗೆ ಹಿಂದೂ ಮುಖಂಡರು ಕಡಿವಾಣ ಹಾಕಬೇಕು  ಕಲೆ  ದೇವರು ಎರಡರ ಮೌಲ್ಯವೂ ಕುಸಿಯುವ ಕಲಾಪ ಇದು

  • ಮುಕೇಶ್ ಎಂ ಕಂಕನಾಡಿ  ಮಂಗಳೂರು