ಚೆನ್ನಪಟ್ಟಣ ಹನುಮಂತ ದೇವರ ರಥೋತ್ಸವ ಶಾಂತಿಯುತ ಸಂಪನ್ನ

ನಮ್ಮ ಪ್ರತಿನಿಧಿ ವರದಿ

ಭಟ್ಕಳ : ಭಾವೈಕ್ಯತೆಯ ಪ್ರತೀಕವಾದ ಇಲ್ಲಿನ ಇತಿಹಾಸ ಪ್ರಸಿದ್ಧ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಬ್ರಹ್ಮರಥೋತ್ಸವ ಬುಧವಾರ ಸಂಜೆ ವಿಜೃಂಭಣೆಯಿಂದ ಶಾಂತಿಯುತವಾಗಿ ಸಂಪನ್ನಗೊಂಡಿತು.

ಯುಗಾದಿಯ ದಿನದಂದು ಧ್ವಜಾರೋಹಣದ ಮೂಲಕ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿತ್ತು. ಬುಧವಾರ ಸಂಜೆ 5.45 ಗಂಟೆಗೆ ಶ್ರೀ ಹನುಮಂತ ದೇವರ ಉತ್ಸವ ಮೂರ್ತಿಯನ್ನು ಹೊತ್ತ ಬೃಹತ್ ರಥವನ್ನು ನೆರೆದಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ಎಳೆಯಲಾಯಿತು. ದೇವಸ್ಥಾನದ ತಾಂತ್ರಿಕ ರಮಾನಂದ ಅವಬೃತ್ ಹಾಗೂ ಇತರೇ ಅರ್ಚಕರು ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಿಕೊಟ್ಟರು.

ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಗ್ರಾಮದೇವನಾದ ಹನುಮಂತನಿಗೆ ಪೂಜೆ, ಹರಕೆ ಹಾಗೂ ರಥಕಾಣಿಕೆ ಸಲ್ಲಿಸಿದರು. ರಥೋತ್ಸವದಲ್ಲಿ ವಿವಿಧ ವೇಷ, ಭಜನೆ, ಚಂಡೆ ವಾದ್ಯ ಜನರ ಗಮನ ಸೆಳೆದವು.