ಸ್ಕೀಮ್ ಹೆಸರಲ್ಲಿ ವಂಚನೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ವಿವಿಧ ಇಲೆಕ್ಟ್ರಾನಿಕ್ಸ್ ವಸ್ತುಗಳು, ಬೈಕ್ ಸಹಿತ ವಿವಿಧ ಆಕರ್ಷಕ ಬಹುಮಾನ ಇಟ್ಟು ಸ್ಕೀಮ್ ಮಾಡಿ, ಬಳಿಕ ಅದರ ಡ್ರಾ ಮಾಡದೇ ಗುಂಪೊಂದು ತಾಲೂಕಿನ ರಾಗಿಹೊಸಳ್ಳಿ, ಹೆಬ್ರೆ, ಭಾಗದ ನೂರಾರು ಜನರಿಗೆ ವಂಚಿಸಿದ ವಿದ್ಯಮಾನ ಇದೀಗ ಬೆಳಕಿಗೆ ಬಂದಿದೆ.
ರಾಗಿಹೊಸಳ್ಳಿಯಲ್ಲಿ ಹೋಟೆಲ್ ನಡೆಸುವ ಸುಧಾಕರ ಹಾಗೂ ಇತರ ಮಿತ್ರರು ಸೇರಿ, ಜುಲೈ-ಆಗಸ್ಟಿನಲ್ಲಿ ಈ ಭಾಗದ ಜನರನ್ನು ಸಂಪರ್ಕಿಸಿ, ತಿಂಗಳಿಗೆ 300 ರೂಪಾಯಿಯಂತೆ 10 ತಿಂಗಳ ಕಂತಿನ ಸ್ಕೀಮ್ ಎಂದು ವಿವರಿಸಿದರು. ತಿಂಗಳಿಗೆ 2 ಡ್ರಾದಂತೆ 5 ತಿಂಗಳಲ್ಲೇ ಸ್ಕೀಮ್ ಮುಗಿಯಲಿದೆ. ಪ್ರತಿ ಡ್ರಾನಲ್ಲಿ 3 ಬಹುಮಾನವಿರುತ್ತದೆ ಎಂದು ಆಸೆ ಹುಟ್ಟಿಸಿದರು. ಜನರು ಸಹ ಆಕರ್ಷಕ ಬಹುಮಾನದ ಆಸೆಗೆ 50 ರೂ ನೋಂದಣಿ ಶುಲ್ಕ ನೀಡಿ, 350 ರೂಪಾಯಿಯಂತೆ ಹಣ ನೀಡಿದರು. 501 ಸದಸ್ಯರ ಗುರಿ ಇಟ್ಟುಕೊಂಡಿದ್ದರು. 501 ಸದಸ್ಯರೇ ಆಗಿದ್ದರೆ ಸುಮಾರು 1,75,350 ರೂ ಸಂಗ್ರಹವಾಗುತ್ತದೆ. ಅಂತಿಮವಾಗಿ ಎಷ್ಟು ಸದಸ್ಯರಾಗಿದ್ದಾರೆಂಬುದು ಅಧಿಕೃತ ಮಾಹಿತಿ ಸಿಗಬೇಕಿದೆ.

ಮೋಸ ಆದದ್ದು ನಂತರ ಇಂತಹ ಯೋಜನೆಗೆ ಜಿಲ್ಲಾಡಳಿತವಾಗಲೀ, ಪೊಲೀಸ್ ಇಲಾಖೆಯಾಗಲೀ ಅನುಮತಿ ಕೊಡುವುದಿಲ್ಲ. ಆದರೆ ಈ ತಂಡದವರು ಜನರಿಗೆ ಎಲ್ಲ ಅನುಮತಿ ಪಡೆದಿದ್ದೇವೆಂದು ಸುಳ್ಳು ಹೇಳಿದ್ದಾರೆಂಬುದು ಜನರ ಮಾತಾಗಿದೆ. ಬಳಿಕ ಆಗಸ್ಟ್ 25ರಂದು ಪ್ರಥಮ ಡ್ರಾ ಇದ್ದು, ಆವತ್ತು ಜನರು ಹೋದಾಗ ಸ್ಕೀಮ್ ನಡೆಸುತ್ತಿದ್ದ ರಾಗಿಹೊಸಳ್ಳಿ ಮಿತ್ರರು ತಾಂತ್ರಿಕ ಕಾರಣದಿಂದ ಡೀಸಿ ಅನುಮತಿ ಸಿಕ್ಕಿಲ್ಲ, ಮುಂದಿನ ಡ್ರಾ ಆಗುತ್ತದೆ ಎಂದರು. ಸೆಪ್ಟೆಂಬರ್ 15ರಂದು 2ನೇ ಡ್ರಾ ಸಹ ಆಗಲಿಲ್ಲ. ಆಗಲೂ ಜನರಿಗೆ ಏನೇನೂ ಕಾರಣ ಹೇಳಿ ದಾರಿ ತಪ್ಪಿಸಿದ್ದಾರೆ. ಸೆಪ್ಟೆಂಬರ್ 30ರಂದು 3ನೇ ಡ್ರಾ ಆಗದೇ ಹೋದಾಗ ಹೆಚ್ಚಿನ ಜನರು ಹೋಗಿ ಆಕ್ಷೇಪಿಸಿ, ಹಣ ವಾಪಸ್ ನೀಡುವಂತೆ ಒತ್ತಡ ಹಾಕಿದ್ದಾರೆ. ಆಗ ಕಂಗಾಲಾದ ಮಿತ್ರ ಮಂಡಳಿಯವರು ಹಣ ಕೊಡುತ್ತೇವೆಂಬ ಭರವಸೆ ನೀಡಿದರೂ ಹಣ ನೀಡಲಿಲ್ಲ.
ಮೋಸ ಹೋದವರು `ಕನ್ನಡ ಜನಾಂತರಂಗ’ ಪ್ರತಿನಿಧಿಯನ್ನು ಸಂಪರ್ಕಿಸಿ ಈ ಮೋಸದ ವಿಷಯ ತಿಳಿಸಿದರು. ಸದ್ಯ ಸಿಕ್ಕ ಮಾಹಿತಿ ಪ್ರಕಾರ ಈ ಗುಂಪಿನವರು ಹಲವರ ಮನೆಗೆ ಹೋಗಿ ಪಾಸ್ಬುಕ್ ವಾಪಸ್ ಪಡೆದಿದ್ದು ಹಣ ವಾಪಸ್ ಕೊಡುವುದಾಗಿ ಹೇಳಿ ಬಂದಿದ್ದಾರೆ. ಆ ಬಡ ಜನರ ಬಳಿಯಿದ್ದ ಒಂದು ದಾಖಲೆಯೂ ಇಲ್ಲದಂತಾಗಿದೆ. ಪತ್ರಿಕೆಯವರು ಮಾಹಿತಿ ಕಲೆ ಹಾಕಿದ ಸುದ್ದಿ ಜನರಿಂದ ತಿಳಿದ ಅವರು, ಸ್ವಲ್ಪ ಜನರಿಗೆ ಹಣ ನೀಡಿದ್ದಾರೆ. ಉಳಿದವರಿಗೆ ಕೊಡುವ ಭರವಸೆ ನೀಡಿದ್ದಾರಂತೆ. ಆದರೆ ಎಷ್ಟೇ ಜನರಿಗೆ ಹಣ ಕೊಟ್ಟರೂ ಒಬ್ಬರಿಗೆ ಬಾಕಿ ಇಟ್ಟರೂ ಅದು ವಂಚನೆಯಾಗುತ್ತದೆ.
ರಾಗಿಹೊಸಳ್ಳಿಯಂತಹ ಅತಿ ಹಿಂದುಳಿದ, ಬಡ ಕೂಲಿಕಾರರು ವಾಸಿಸುವ ಪ್ರದೇಶದಲ್ಲಿ ನಿತ್ಯ ದುಡಿದು ಬದುಕು ಸಾಗಿಸುತ್ತಾರೆ. ಸ್ವಲ್ಪ ಉಳಿತಾಯ ಮಾಡಿ ಮನೆಗೆ ಏನಾದರೂ ಒಂದು ವಸ್ತು ತರುವ ಕನಸು ಅವರದ್ದಾಗಿದ್ದವು. ಈ ಸ್ಕೀಮಿನಲ್ಲಿ ಹಣ ಹಾಕಿದರೆ ಏನಾದರೂ ಅನುಕೂಲ ಆಗುತ್ತದೆಯೆಂದು ನಂಬಿ ಮೋಸ ಹೋಗಿದ್ದಾರೆ. ಈ ಮುಗ್ಧ ಜನರಿಗೆ ನ್ಯಾಯ ಕೊಡಿಸಲು ಪೊಲೀಸ್ ಇಲಾಖೆ ಮುಂದಾಗುತ್ತಿದೆಯೇ ಎಂಬುದನ್ನು ಕಾದು ನೋಡಬೇಕಿದೆ.