ಮೊಬೈಲ್ ಟವರ್ ಹೆಸರಿನಲ್ಲಿ ಮೋಸ

ನಮ್ಮ ಪ್ರತಿನಿಧಿ ವರದಿ

 ಕಾರ್ಕಳ : ಮೊಬೈಲ್ ಟವರ್ ನಿರ್ಮಿಸುತ್ತೇವೆ, ಜಾಗ ಕೊಡಿ ಎಂದು ನಂಬಿಸಿ, ಜಾಗದ ಮಾಲಿಕರಿಂದಲೇ 51,500 ರೂ ವಸೂಲಿ ಮಾಡಿ ಮೋಸ ಮಾಡಿದ ಘಟನೆ ತಾಲೂಕಿನ ಬೆಳ್ಮಣ್ಣು ಗ್ರಾಮದಲ್ಲಿ ನಡೆದಿದೆ. ಬೆಳ್ಮಣ್ಣು ಚರ್ಚ್ ಬಳಿಯ ನಿವಾಸಿ ಜೇಕಬ್ ಡಿಸೋಜ (64) ವಂಚನೆಗೊಳಗಾದ ವ್ಯಕ್ತಿ.

ರಣವೀರ್ ಚವ್ಹಾಣ್, ಅಂಗವ್ ಬಾಂದ್ರಾ, ಜೈಪ್ರಕಾಶ್ ಅಗರ್‍ವಾಲ್ ಮತ್ತಿತರರು ಮೊಬೈಲ್ ಟವರ್ ನಿರ್ಮಾಣಕ್ಕಾಗಿ ಬಾಡಿಗೆ ಆಧಾರದಲ್ಲಿ ಜಾಗ ಬೇಕಿದೆ ಎನ್ನುವ ಪತ್ರಿಕಾ ಜಾಹೀರಾತಿನ ಮೇರೆಗೆ  ಮಾತುಕತೆ ನಡೆಸಿದ್ದರು.

ಅದರಂತೆ ಜೇಕಬ್ ಡಿಸೋಜಾ ಎಂಬವರಿಗೆ ಸೇರಿದ ಜಾಗದಲ್ಲಿ ಮೊಬೈಲ್ ಅಳವಡಿಸುವುದಾಗಿ ಜತೆಗೆ ಇದಕ್ಕೆ ಪ್ರತಿಯಾಗಿ 20 ಲಕ್ಷ ರೂ ನೀಡುವ ಭರವಸೆ ನೀಡಿದ್ದರು. ಬಳಿಕ ಕಳೆದ ಆ 16ರಂದು ಕಾಗದಪತ್ರಗಳ ಸಿದ್ದತೆಯ ಕಾರಣವನ್ನು ನೀಡಿ 51,500 ರೂ ಜಾಗದ ಮಾಲೀಕ ಜೇಕಬ್ ಅವರಿಂದ ಪಡೆದಿದ್ದರು. ಹಣಪಡೆದ ಆರೋಪಿಗಳು ಬಳಿಕ ಇತ್ತ ಸುಳಿಯದೇ ನಾಪತ್ತೆಯಾಗಿದ್ದರು.

ಆರೋಪಿಗಳು ಭಾರತ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ಹೆಸರನ್ನು ದುರ್ಬಳಕೆ ಮಾಡಿ ಪೊರ್ಜರಿ ದಾಖಲಾತಿ ನೀಡಿ ನಂಬಿಕೆ ದ್ರೋಹ ಎಸಗಿದ್ದಾರೆ ಎನ್ನುವ ವಿಚಾರ ಬಯಲಾಗಿದ್ದು, ವಂಚನೆಗೊಳಗಾದ ಜೇಕಬ್ ಡಿಸೋಜಾ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರ.