ದೆಹಲಿ ಹುಡುಗಿ ಮದುವೆಯಾದ ನಗರದ ಯುವಕನಿಂದ ವಂಚನೆ, ಪೊಲೀಸಿಗೆ ದೂರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಯುವಕನೊಬ್ಬ ದೆಹಲಿ ಮೂಲದ ಯುವತಿಯೊಬ್ಬಳನ್ನು ಮದುವೆಯಾಗಿ ಸರಿಯಾಗಿ ನಡೆಸಿಕೊಳ್ಳದೇ ವಂಚಿಸಿದ್ದಾನೆ ಎಂದು ದೂರಿ ಯುವತಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆದರೆ ಅಲ್ಲೂ ನ್ಯಾಯ ಮರೀಚಿಕೆಯಾದಾಗ ತವರೂರು ದೆಹಲಿಗೆ ತೆರಳಿ ಅಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾಳೆ.

ಮೂಲತಃ ದೆಹಲಿಯ ರಜಪೂತ ಸಮುದಾಯದ ಯುವತಿ ಪ್ರಭಾ ಬೊಹ್ರಾಳನ್ನು ಈಕೆಯ ಸಹೋದರ ಮಂಗಳೂರಿನ ಚಿಲಿಂಬಿಯಲ್ಲಿರುವ ಆದರ್ಶ ನಗರದ ಕಿರೋಡಿಯನ್ ಲೇನ್ ವಾಸಿ ಮನೋಜ್ ನಾಯ್ಕ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದ. ತಂದೆ ತಾಯಿ ಇಲ್ಲದ ಬೊಹ್ರಾಳನ್ನು ಸಹೋದರನೇ ಸಾಕುತ್ತಿದ್ದು, ಶಾದಿ ಡಾಟ್ ಕಾಮ್ ಅಂತರ್ಜಾಲ ತಾಣದಲ್ಲಿ ಮದುವೆಗೆ ಪ್ರಸ್ತಾಪ ಇಟ್ಟು ಮನೋಜ್ ನಾಯ್ಕ್ ಹಾಗೂ ಆತನ ಮನೆಯವರ ಒಪ್ಪಿಗೆ ಮೇಲೆ ಮದುವೆ ಕಾರ್ಯಗಳನ್ನೆಲ್ಲಾ ಸುಸೂತ್ರವಾಗಿ ಮಾಡಿ ಮುಗಿಸಲಾಗಿತ್ತು.

ಪ್ರಭಾಳ ಸಹೋದರ ಮಹೇಂದ್ರ ಸಿಂಗ್ ಚೆನ್ನಾಗಿಯೇ ಮದುವೆ ಮಾಡಿಕೊಟ್ಟಿದ್ದ. ಪ್ರಭಾಳಿಗೆ ಅತ್ತೆ, ನಾದಿನಿ, ಅತ್ತೆಯ ಸಹೋದರಿ ಎಲ್ಲರೂ ಸೇರಿ ಕಿರುಕುಳ ನೀಡುತ್ತಿದ್ದರೂ ಪತಿ ಮನೋಜ್ ಮಾತ್ರ ಚೆನ್ನಾಗಿಯೇ ನೋಡಿಕೊಂಡಿದ್ದ.

ಆದರೆ ಈ ನಡುವೆ ಪ್ರಭಾಳ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಮಂಗಳೂರಿಗೆ ಬಂದ ಮಹೇಂದ್ರ ಸಿಂಗ್ ಸಹೋದರಿಯನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದ. ಪತಿ ಕರೆತರಲು ಹೋಗದಿದ್ದಾಗ ಸಹೋದರನೇ ಆಕೆಯನ್ನು ಕರೆ ತಂದು ಬಿಟ್ಟುಹೋಗಿದ್ದ. ನಂತರ ಮನೋಜ್ ನಾಯ್ಕ, ಅತ್ತೆ ಜಯಂತಿ, ಅತ್ತೆಯ ಸಹೋದರಿ ಗುಲಾಬಿ, ನಾದಿನಿ ವಿರುದ್ಧ ಪ್ರಭಾ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.

“ಆದರೆ ಇಲ್ಲಿ ಪೊಲೀಸರು ಏನೂ ಕ್ರಮ ಕೈಗೊಂಡಿಲ್ಲ. ಕಮಿಷನರಗೆ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ” ಎನ್ನುವ ಪ್ರಭಾ,  ಇದೀಗ ಪ್ರಭಾ ದೆಹಲಿಗೆ ತೆರಳಿ ಅಲ್ಲಿ ದೂರು ದಾಖಲಿಸಲು ತಯಾರಾಗಿದ್ದಾಳೆ.