70 ಲಕ್ಷ ರೂ ಬ್ಯಾಂಕಿಗೆ ವಂಚಿಸಿದ ಮ್ಯಾನೇಜರ್ !

ಕರಾವಳಿ ಅಲೆ ವರದಿ

ಮಂಗಳೂರು : 46 ಮಂದಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ 70 ಲಕ್ಷ ರೂ ಸಾಲ ನೀಡಿ ಬ್ಯಾಂಕಿಗೆ ವಂಚಿಸಿದ ಮ್ಯಾನೇಜರ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪುತ್ತೂರು ರಾಷ್ಟ್ರೀಕೃತ ಬ್ಯಾಂಕಿನ ವಗ್ಗ ಶಾಖೆಯ ಮ್ಯಾನೇಜರ್ ಟಿ ದೊರೈ ವಂಚನೆ ಎಸಗಿದ್ದಾರೆ ಎಂದು ಬ್ಯಾಂಕಿನ ಆಡಿಟ್ ವರದಿಯ ಮೂಲಕ ಖಚಿತಪಟ್ಟಿದೆ. ಇದೀಗ ಆರೋಪಿಯನ್ನು ಅಮಾನತು ಮಾಡಲಾಗಿದೆ.

ಹಲವು ಗ್ರಾಹಕರ ಹೆಸರಿನಲ್ಲಿ ನಕಲಿ ಖಾತೆ ತೆರೆದ ಟಿ ದೊರೈ, ಅವರೆಲ್ಲರಿಗೂ ಕೃಷಿ, ಚಿನ್ನಾಭರಣಕ್ಕೆಂದು ಸಾಲ ಸೌಲಭ್ಯಗಳನ್ನು ನೀಡಿದ್ದಾನೆ. ಪ್ರತೀ ಖಾತೆಗೂ ಈತ 50ರಿಂದ 2 ಲಕ್ಷದವರೆಗೂ ಹಣ ಜಮೆ ಮಾಡಿದ್ದಾನೆ. ಮ್ಯಾನೇಜರ್ ಆಗಿ ಬಂದ ದಿನದಿಂದಲೇ ಈ ವಂಚನೆಯನ್ನು ಶುರು ಮಾಡಿದ್ದಾನೆ.

ಸಾಲ ಸೌಲಭ್ಯ ನೀಡಿದ ತಕ್ಷಣ ಅದರ ಹಣವನ್ನು ನಕಲಿ ಖಾತೆಗೆ ತುಂಬಿ ಬಳಿಕ ಅದನ್ನು ತನ್ನ ಖಾತೆಗೆ ವರ್ಗಾವಣೆ

ಮಾಡುತ್ತಿದ್ದ. ಆದರೆ ಬ್ಯಾಂಕಿನ ಆಡಿಟ್ ಆಗುವವರೆಗೂ ಈತನ ವಂಚನೆ ಬಯಲಿಗೆ ಬಂದಿರಲಿಲ್ಲ. ಬ್ಯಾಂಕಿನಿಂದ ಸಾಲ ಪಡೆದುಕೊಂಡವರಿಗೆ ನೊಟೀಸ್ ಕಳುಹಿಸಿದ ಬಳಿಕ ಕೆಲವರು ತಾವು ಸಾಲ ಪಡೆದೇ ಇಲ್ಲ ಎಂದು ವಿಚಾರಿಸಲು ಬ್ಯಾಂಕಿಗೆ ಬಂದಾಗ ಹಗರಣ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಇನಸ್ಪೆಕ್ಟರ್ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಐಪಿಸಿ ಸೆಕ್ಷನ್ 403, 409, 417, 420, 464, 465 ಮತ್ತು 471ರಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿ ಜೆ ಸಾಜಿತ್ ಹೇಳಿದ್ದಾರೆ.

 

LEAVE A REPLY