ನಕಲಿ ರಶೀದಿ ಸೃಷ್ಟಿಸಿ ವಂಚನೆ

8 ಮಂದಿ ವಿರುದ್ಧ ದೂರು


ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಸೀದಿಗೆ ಸಂಬಂಧಿಸಿದ ರಶೀದಿ ಪುಸ್ತಕವನ್ನು ನಕಲಿಯಾಗಿ ಸೃಷ್ಟಿಸಿ ಮಸೀದಿ ಹೆಸರಿನಲ್ಲಿ ಜಮಾತಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳ ವಿರುದ್ಧ ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳನ್ನು ಹಸನಬ್ಬ ಕೆ ಎಮ್, ಅಬ್ದುಲ್ ಹಮಿದ್, ರಜಾಕ್, ರಿಯಾಜ್, ಹಸನಬ್ಬ ಬಿ, ಹಮೀದ್, ಇಮ್ತಿಯಾಜ್ ಮತ್ತು ಶಫೀಕ್ ಎಂದು ಗುರುತಿಸಲಾಗಿದೆ. ಸ್ಥಳೀಯ ನಿವಾಸಿ ಉಸ್ಮಾನ್ ಅಬ್ದುಲ್ಲಾ ಎಂಬವರು ಸೂರಿಂಜೆ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿದ್ದಾರೆ. ಇವರನ್ನು ಮತ್ತು ಕಮಿಟಿಯ ಇತರ ಸದಸ್ಯರನ್ನು ಹೆದರಿಸಿ ಈ ಎಲ್ಲ ಆರೋಪಿಗಳು ಸೂರಿಂಜೆ ಮುಹಿಯುದ್ದೀನ್ ಜುಮ್ಮ ಮಸೀದಿಯ ಆಡಳಿತವನ್ನು ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆನ್ನಲಾಗಿದೆ.

“ಆರೋಪಿಗಳೆಲ್ಲ ಸೇರಿಕೊಂಡು ಅಧ್ಯಕ್ಷರನ್ನು ಮತ್ತು ಕಮಿಟಿ ಸದಸ್ಯರನ್ನು ಹೆದರಿಸಿದ್ದಾರೆ. ಮಸೀದಿಗೆ ಸೇರಿದ ರಶೀದಿ ಪುಸ್ತಕ, ನಿಖಾ ನಾಮೆ ರಿಜಿಸ್ಟರ್ ಇತ್ಯಾದಿಗಳನ್ನು ಉಸ್ಮಾನ್ ಅಬ್ದುಲ್ಲಾರ ಗಮನಕ್ಕೆ ತಾರದೇ ಮಸೀದಿಯಿಂದ ಕೊಂಡುಹೋಗಿ ನಕಲಿ ರಶೀದಿ ಸೃಷ್ಟಿಸಿ ಮಸೀದಿಯ ಹೆಸರಿನಲ್ಲಿ ಸುಮಾರು 3 ಲಕ್ಷ ರೂಪಾಯಿ ಸಂಗ್ರಹ ಮಾಡಿದ್ದಾರೆ. ಆದರೆ ಈ ಸಂಗತಿ ಮಸೀದಿಯ ಅಧ್ಯಕ್ಷರಿಗೆ  ಮತ್ತು ಜಮಾತಿಗೆ ಗೊತ್ತೇ ಇಲ್ಲ. ಹೀಗಾಗಿ ಈ ಎಲ್ಲಾ 8 ಮಂದಿ ಆರೋಪಿಗಳು ಮೋಸ ಮಾಡಿ ಜಮಾತಿಗೆ ಸುಮಾರು 3 ಲಕ್ಷ ನಷ್ಟ ಉಂಟು ಮಾಡಿದ್ದಾರೆ” ಎಂದು ಅಧ್ಯಕ್ಷ ಉಸ್ಮಾನ್ ಸುರತ್ಕಲ್ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.