ಪಾಪ್ ಸ್ಟಾರ್ ರೆಮೊ ವಿರುದ್ಧ ಚಾರ್ಜ್ ಶೀಟ್

ಪಾಪ್ ಸ್ಟಾರ್ ರೆಮೊ ಫೆರ್ನಾಂಡಿಸಿ

ಗೋವಾ : ಕಳೆದ ವರ್ಷ ತಮ್ಮ ಪುತ್ರನ ಕಾರು ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಉತ್ತರ  ಗೋವಾದ ಅಗ್ಗಸೈಮ್ ಪೊಲೀಸರು ಪಾಪ್ ಸ್ಟಾರ್  ರೆಮೊ ಫೆರ್ನಾಂಡಿಸಿ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ್ದಾರೆ. ಗೋವಾ ಮಕ್ಕಳ ಹಕ್ಕುಗಳ ಕಾಯಿದೆ 2003 ಇದರ ಸೆಕ್ಷನ್ 8ರ ಅನ್ವಯ ಪ್ರಕರಣ ದಾಖಲಿಸಲಾಗಿದೆಯೆಂದು ತಿಳಿದುಬಂದಿದೆ.

ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಏರಿಸ್ ರಾಡ್ರಿಗಸ್  ಕಳೆದ ವರ್ಷದ ಡಿಸೆಂಬರ್ 15ರಂದು ದೂರು ದಾಖಲಿಸಿದ್ದರು. ರೆಮೊ ಪುತ್ರ ಜೊನಾಹ್ ಫೆರ್ನಾಂಡಿಸ್ ಚಲಾಯಿಸುತ್ತಿದ್ದ ಕಾರು ಹಳೆ ಗೋವಾ ಪ್ರದೇಶದಲ್ಲಿರುವ ಚರ್ಚೊಂದಕ್ಕೆ ಹೊರಟಿದ್ದ ಅಲ್ಲೆನ್  ಡಿ’ಸೋಜ ಎಂಬ ಬಾಲಕಿಗೆ ಡಿಕ್ಕಿ ಹೊಡೆದಿತ್ತು. ಈ ಸಂದರ್ಭ ಕಾರಿನಲ್ಲಿ ರೆಮೊ ಕೂಡ ಇದ್ದರು.

ಬಾಲಕಿಯನ್ನು ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ರೆಮೊ ನಿಂದಿಸಿದ್ದರೆನ್ನಲಾಗಿದೆ. ಈ ಪ್ರಕರಣದಲ್ಲಿ ರೆಮೊ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.