ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ಮಾರ್ಗ ಬದಲಾವಣೆಯಿಂದ ಹೆಚ್ಚಿನ ಲಾಭವಿಲ್ಲ

ಪ್ರಯಾಣ ಅವಧಿ ಕೇವಲ 10 ನಿಮಿಷ ಕಡಿತ

ವಿಶೇಷ ವರದಿ

ಕಾರವಾರ : ವಾರದಲ್ಲಿ ಮೂರು ಬಾರಿ ಸಂಚರಿಸುವ ಯಶವಂತಪುರ-ಕಾರವಾರ ಎಕ್ಸ್‍ಪ್ರೆಸ್ ರೈಲನ್ನು ಜೂನ್ 2ರಿಂದ ತುಮಕೂರು, ಅರಸೀಕೆರೆ ಮಾರ್ಗದ ಬದಲು ನೆಲಮಂಗಲ, ಶ್ರವಣಬೆಳಗೊಳ ಮೂಲಕ ಸಂಚರಿಸುವಂತೆ ಮಾಡುವ ನೈಋತ್ಯ ರೈಲ್ವೆ ನಿರ್ಧಾರವು  ಪ್ರಯಾಣ ಅವಧಿಯನ್ನು ಕೇವಲ 10 ನಿಮಿಷಗಳಷ್ಟು ಕಡಿಮೆ ಮಾಡುವುದು ಎಂದು ತಿಳಿದುಬಂದಿದೆ.

ಅದೇ ಸಮಯ ಯಶವಂತಪುರ-ಮಂಗಳೂರು ಜಂಕ್ಷನ್ ನಡುವೆ ಸಂಚರಿಸುವ ಗೋಮಟೇಶ್ವರ ಎಕ್ಸ್‍ಪ್ರೆಸ್ ರೈಲಿನ ಸಮಯವನ್ನು ಬೆಳಿಗ್ಗೆ 7.50ರ ಬದಲು 7.10ಕ್ಕೆ ಬದಲಾಯಿಸಿರುವುದರಿಂದ ಇದು ಪ್ರಯಾಣ ಅವಧಿಯನ್ನು 40 ನಿಮಿಷಗಳ ಕಾಲ ವಿಸ್ತರಿಸಲಿದೆ.

ಹೊಸ ಸಮಯ ಸೂಚಿಯಂತೆ ಬೆಳಿಗ್ಗೆ 7 ಗಂಟೆಯ ಬದಲು 7.10ಕ್ಕೆ ಹೊರಡುವ ಯಶವಂತಪುರ-ಕಾರವಾರ ರೈಲು ರೈಲು  ಮಂಗಳೂರು ಜಂಕ್ಷನ್ ನಿಲ್ದಾಣವನ್ನು ಸಂಜೆ 5.40ಕ್ಕೆ ತಲುಪಲದೆ. ಬಂಟ್ವಾಳ ಹಾಗೂ ಮಂಗಳೂರು ಜಂಕ್ಷನ್ ನಡುವೆ ಇರುವ ಕೇವಲ 19 ಕಿ ಮೀ ದೂರವನ್ನು ಕ್ರಮಿಸಲು ಅದು 1 ಗಂಟೆ 48 ನಿಮಿಷ ತೆಗೆದುಕೊಳ್ಳುತ್ತದೆ. ಅದೇ ಸಮಯ ಗೋಮಟೇಶ್ವರ ಎಕ್ಸ್‍ಪ್ರೆಸ್  ಬೆಳಿಗ್ಗೆ 7.10ಕ್ಕೆ ಪ್ರಯಾಣ ಆರಂಭಿಸಿದರೆ ಸಂಜೆ 5.30ಕ್ಕೆ ಮಂಗಳೂರು ಜಂಕ್ಷನ್ ತಲುಪುತ್ತದೆ.

ಕಾರವಾರ ಎಕ್ಸ್‍ಪ್ರೆಸ್ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಕಾರ್ಯಾಚರಿಸಿದರೆ, ಗೋಮಟೇಶ್ವರ ಎಕ್ಸ್ ಪ್ರೆಸ್ ಮಂಗಳವಾರ, ಗುರುವಾರ ಹಾಗೂ ಶನಿವಾರ ಸೇವೆಯೊದಗಿಸುತ್ತಿದೆ. ಆದರೆ ಕಾರವಾರ ಎಕ್ಸ್‍ಪ್ರೆಸ್ ರೈಲಿನ ವೇಳಾ ಪಟ್ಟಿಯಲ್ಲಿನ ಬದಲಾವಣೆಯಿಂದಾಗಿ  ಅದು ಮಂಗಳೂರಿನಿಂದ ಆರಂಭಿಸುವ ಪಯಣದ ಅವಧಿ ಕಡಿಮೆಯಾಗುತ್ತದೆ. ಮಂಗಳೂರಿನಿಂದ 11.30ಕ್ಕೆ ಹೊರಡುವ ರೈಲು ಈ ಹಿಂದೆ 10 ಗಂಟೆಗೆ ತಲುಪುತ್ತಿದ್ದರೆ, ಇನ್ನು ರಾತ್ರಿ 8.30ಕ್ಕೆ ತಲುಪಲಿದೆ. ಆದರೆ ಎರಡೂ ರೈಲುಗಳು ಮಂಗಳೂರಿನಿಂದ ಹೊರಡುವ ಸಮಯದಲ್ಲಿ ಬದಲಾವಣೆ ಮಾಡಲಾಗಿಲ್ಲ.

ನೈಋತ್ಯ ರೈಲ್ವೆ ಮೂಲಗಳ ಪ್ರಕಾರ ಕಾರವಾರ-ಯಶವಂತಪುರ ರೈಲಿನ ಪ್ರಯಾಣ ಅವಧಿ 1 ಗಂಟೆ 30 ನಿಮಿಷಗಳ ಕಾಲ ಕಡಿಮೆಯಾಗಿದ್ದರೂ ರೈಲು ಮಂಗಳೂರು ಜಂಕ್ಷನ್ ಪ್ರವೇಶಿಸಲು ಬಹಳಷ್ಟು ಕಾಯಬೇಕಾಗಿರುವುದೇ ಪ್ರಯಾಣದ ಅವಧಿ ಅಧಿಕಗೊಳ್ಳುವಂತೆ ಆಗಿದೆ. ರೈಲು ಮಂಗಳೂರು ಜಂಕ್ಷನ್ ಪ್ರವೇಶಿಸಲು ಬೇಗನೇ ಅನುಮತಿ ದೊರೆತಲ್ಲಿ ಬಹಳಷ್ಟು ಅನುಕೂಲಕರವಾಗಲಿದೆ ಎಂದು ನೈಋತ್ಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.