ಪುತ್ತೂರು ದೇವಳದ ತಂತ್ರಿ ಬದಲಾವಣೆಗೆ ತಡೆಯಾಜ್ಞೆ

ವ್ಯವಸ್ಥಾಪನಾ ಸಮಿತಿಗೆ ಮುಖಭಂಗ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ಈ ಬಾರಿಯೂ ಗದ್ದಲ, ಗೊಂದಲಗಳು ಸೃಷ್ಟಿಯಾಗಿದೆ. ಕಳೆದ ಬಾರಿ ಆಮಂತ್ರಣ ಪತ್ರಿಕೆಯಲ್ಲಿ ಡೀಸಿ ಇಬ್ರಾಹಿಂ ಹೆಸರು ಮುದ್ರಿಸಿದ್ದಕ್ಕಾಗಿ ವಿವಾದ ಉಂಟಾಗಿತ್ತು. ಈ ಬಾರಿ ತಂತ್ರಿಗಳ ಬದಲಾವಣೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು ಭಕ್ತರ ಆಕ್ರೋಶಕ್ಕೂ ಕಾರಣವಾಗಿದೆ.

ದೇವಸ್ಥಾನದಲ್ಲಿ ಕಳೆದ ಕೆಲವು ವರ್ಷಗಳಿಂದ ತಂತ್ರಿಯಾಗಿ ಸೇವೆ ಮಾಡುತ್ತಿದ್ದ ಕುಂಟಾರು ರವೀಶ ತಂತ್ರಿಗಳನ್ನು ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನೇಮP Àಮಾಡಲಾಗಿತ್ತು. ಕಳೆದ ಬಾರಿಯ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ದಿಸಿದ್ದ ರವೀಶ ತಂತ್ರಿ ಚುನಾವಣೆಯಲ್ಲಿ ಸೋತಿದ್ದರು. ಆ ಬಳಿಕ ಪುತ್ತೂರು ದೇವಳದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರಲಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೂ ಅವರು ಬಾರದೆ ಬೇರೊಬ್ಬರನ್ನು ಬದಲಿಯಾಗಿ ಕಳುಹಿಸುತ್ತಿದ್ದರು.

ತರುವಾಯ ತಂತ್ರಿಗಳನ್ನು ಬದಲಾವಣೆ ಮಾಡುವುದಾಗಿ ನೂತನ ವ್ಯವಸ್ಥಾಪನಾ ಸಮಿತಿ ತೀರ್ಮಾನವನ್ನು ಕೈಗೊಂಡಿತ್ತು. ಇದಕ್ಕಾಗಿ ವ್ಯವಸ್ಥಾಪನಾ ಸಮಿತಿ ಸಭೆ ಕರೆದು ಸಭೆಯ ಒಮ್ಮತದಂತೆ ಕೆಮ್ಮಿಂಜೆ ನಾಗೇಶ ತಂತ್ರಿಗಳನ್ನು ಈ ಬಾರಿಯ ಜಾತ್ರೋತ್ಸವಕ್ಕೆ ಆಹ್ವಾನ ನೀಡಲಾಗಿದ್ದು ಅವರು ಒಪ್ಪಿಕೊಂಡಿದ್ದರು. ತಂತ್ರಿಗಳ ಬದಲಾವಣೆ ಮಾಡಿದ್ದನ್ನು ವಿರೋಧಿಸಿ ಸಮಿತಿ ಸದಸ್ಯರೋರ್ವರಾದ ನಾಗರಾಜ್ ಭಟ್ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟು ವ್ಯವಸ್ಥಾಪನಾ ಸಮಿತಿಯ ತೀರ್ಮಾನಕ್ಕೆ ತಡೆಯಾಜ್ಞೆಯನ್ನು ನೀಡಿದ್ದು ರವೀಶ್ ತಂತ್ರಿಗಳನ್ನೇ ನೇಮಕ ಮಾಡುವಂತೆ ಸೂಚಿಸಿದೆ.

ಪ್ರತಿತಂತ್ರ

ಹೈ ಕೋರ್ಟ್ ಆದೇಶದಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಭಾರೀ ಮುಖಭಂಗವಾಗಿದ್ದು ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದೆ. ಸಮಿತಿಯ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಅವರು ಹೇಳಿಕೆ ನೀಡಿ “ಕುಂಟಾರು ರವೀಶ ತಂತ್ರಿಗಳ ಜೊತೆ ಸಮಿತಿ ಯಾವುದೇ ಅಗೌರವದಿಂದ ನೋಡಿಕೊಂಡಿಲ್ಲ. ಜಾತ್ರೆಯ ವಿಚಾರದಲ್ಲಿ ಅವರೊಂದಿಗೆ ಮಾತನಾಡಿಯೇ ನಾವು ತೀರ್ಮಾನವನ್ನು ಕೈಗೊಂಡಿದ್ದೇವೆ. ಪ್ರಶ್ನೆಯಲ್ಲಿ ಕಂಡು ಬಂದ ಮಾಧರಿಯಲ್ಲೇ ನಾವು ಕ್ರಮವನ್ನು ಕೈಗೊಂಡು ಹೊಸ ತಂತ್ರಿಗಳನ್ನು ನೇಮಕ ಮಾಡಿದ್ದೇವೆ. ಆದರೂ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಈ ನಡುವೆ ಎರಡು ದಿನದೊಳಗೆ ಕುಂಟಾರು ರವೀಶ ತಂತ್ರಿಗಳನ್ನು ಮರು ನೇಮಕ ಮಾಡದೇ ಇದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಪರಿವಾರ ಸಂಘಟನೆಗಳು ಎಚ್ಚರಿಕೆಯನ್ನು ನೀಡಿದೆ.

ಒಟ್ಟಿನಲ್ಲಿ ಈ ಬಾರಿ ಪುತ್ತೂರು ಒಡೆಯನ ಜಾತ್ರಾ ಹಬ್ಬ ಗೊಂದಲಮಯವಾಗಲಿದ್ದು, ಹೈ ಕೋರ್ಟ್ ಆದೇಶದ ವಿರುದ್ದ ನೂತನ ಸಮಿತಿ ಪ್ರತಿತಂತ್ರ ಹೆಣೆದರೆ ದೇವಸ್ಥಾನದ ಜಾತ್ರಾ ವಿಚಾರ ಕೆಲವರಿಗೆ ಸ್ವಪ್ರತಿಷ್ಟೆಯ ವಿಚಾರವಾಗಿ ಮಾರ್ಪಾಡಾಗುವ ಸಾಧ್ಯತೆ ಇದೆ.