ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್

ಇಂದು ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಫೈನಲ್

  • ಎಸ್ ಜಗದೀಶ್ಚಂದ್ರ ಅಂಚನ್ ಸೂಟರಪೇಟೆ

ವಿರಾಟ್ ಕೊಹ್ಲಿ ಸಾರಥ್ಯದ ಭಾರತೀಯ ಕ್ರಿಕೆಟ್ ತಂಡ ಅತ್ಯಂತ ಶಕ್ತಿಶಾಲಿ ತಂಡವಾಗಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಹೊರಹೊಮ್ಮಿದೆ. ಲೀಗ್ ಹಂತದಲ್ಲಿ ಎರಡು ಪಂದ್ಯಗಳನ್ನು ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಪಡೆದಿದ್ದ ಭಾರತ ಇದೀಗ ಫೈನಲ್ ಪಂದ್ಯಕ್ಕೆ ಸಜ್ಜಾಗಿ ನಿಂತಿದೆ. ಇಂದು ನಡೆಯುವ ಫೈನಲ್ ಪಂದ್ಯದಲ್ಲಿ ತನ್ನ ಬದ್ಧ ವೈರಿ ಪಾಕಿಸ್ತಾನ ತಂಡದ ವಿರುದ್ಧ ಭಾರತ ಚಾಂಪ್ಯನ್ ಪಟ್ಟಕ್ಚೆ ಬಿಗ್ ಫೈಟ್ ನಡೆಸಲಿದೆ.

ಈ ಪಂದ್ಯ ರೋಚಕವಾಗುವ ಸಾಧ್ಯತೆ ಇದ್ದು ಇತ್ತಂಡಗಳಿಗೂ ಪ್ರತಿಷ್ಠೆಯದಾಗಿದೆ. ಭಾರತೀಯ ಕ್ರೀಡಾಭಿಮಾನಿಗಳಿಗೆ ಇದೊಂದು ರೋಮಾಂಚನದ ಕ್ಷಣ. ಕ್ರಿಕೆಟ್ ರಂಗದಲ್ಲಿ ಉಭಯತಂಡಗಳು ಸಾಂಪ್ರದಾಯಿಕ ಎದುರಾಳಿಗಳು. ಹಾಗಾಗಿ ಈ ಹೈವೋಲ್ಟೇಜ್ ಪಂದ್ಯವನ್ನು ನೋಡುವ ಅವಕಾಶ. ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು. ಆದರೆ, ಭಾರತ ನಾಲ್ಕು ಬಾರಿ ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ, ಎರಡು ಬಾರಿ ಚಾಂಪ್ಯನ್ ಕೂಡ ಆಗಿದೆ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದಲ್ಲಿ ಉಭಯತಂಡಗಳು ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತೀಯ ತಂಡ ಎದುರಾಳಿ ಪಾಕಿಸ್ತಾನ ತಂಡವನ್ನು ಭರ್ಜರಿಯಾಗಿಯೇ ಸೋಲಿಸಿದೆ. ಈ ಗೆಲುವಿನ ಜಾಡಿಯಲ್ಲೇ ಹಾಲಿ ಚಾಂಪ್ಯನ್ ಆಗಿರುವ ಭಾರತ ಪ್ರತಿಷ್ಟಿತ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಜಯದ ನಿರೀಕ್ಷೆಯಲ್ಲಿದೆ .

ಅತ್ಯಂತ ಕುತೂಹಲ ಮೂಡಿಸಿದ ಈ ಫೈನಲ್ ಕಾದಾಟ ಉಭಯತಂಡಗಳಿಗೂ ಮಹತ್ವದಾಗಿದೆ. ಐಸಿಸಿ ಕ್ರಿಕೆಟ್ ಟೂರ್ನಮೆಂಟ್ ಫೈನಲ್ ಒಂದರಲ್ಲಿ ಹತ್ತು ವರ್ಷಗಳ ಬಳಿಕ ಭಾರತ-ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಳಿಯಾಗುತ್ತಿವೆ. ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ನಡೆದಿದ್ದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ಫೈನಲ್ ಪಂದ್ಯದಲ್ಲಿ ಇತ್ತಂಡ ಗಳು ಸೆಣಸಾಟ ನಡೆಸಿತ್ತು. ಈ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಭಾರತೀಯ ತಂಡ ಮೈನವಿರೇಳಿಸುವ ಆಟವಾಡಿ ಚೊಚ್ಚಲ ಟ್ವೆಂಟಿ ವಿಶ್ವಕಪ್ಪನ್ನು ಮುಡಿಗೇರಿಸಿಕೊಂಡಿತ್ತು.

ಆದರೆ, ಏಕದಿನ ಕ್ರಿಕೆಟ್ ಮಾದರಿಯ ಟೂರ್ನಮೆಂಟಿನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಬರೋಬ್ಬರಿ 32 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಫೈನಲ್ ಪಂದ್ಯವನ್ನು ಆಡುತ್ತಿದ್ದೆ.

ಆಸ್ಟ್ರೇಲಿಯಾದಲ್ಲಿ 1985ರಲ್ಲಿ ವಿಶ್ವ ಕ್ರಿಕೆಟ್ ಚಾಂಪ್ಯನ್ ಶಿಪ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಕಾದಾಡಿದ್ದವು. ಆ ಟೂರ್ನಿಯಲ್ಲಿ ಭಾರತ ತಾನಾಡಿದ ಮೊದಲ ಮುಖಾಮುಖಿಯಲ್ಲೇ ಪಾಕಿಸ್ತಾನೀಯರನ್ನು ಬಗ್ಗುಬಡಿರುವುದು ಮಾತ್ರವಲ್ಲ ಫೈನಲ್ ಪಂದ್ಯದಲ್ಲೂ ರೋಮಾಂಚಕ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಗೆದ್ದಿದೆ.

ಇತ್ತಂಡಗಳು ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಮಬಲದ ಹೋರಾಟವನ್ನು ನೀಡಿ ಫೈನಲಿಗೆ ಪ್ರವೇಶಿಸಿದೆ. ಭಾರತ ಲೀಗಿನಲ್ಲಿ ಪಾಕಿಸ್ತಾನ, ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಪಡೆದರೆ, ಶ್ರೀಲಂಕಾ ವಿರುದ್ಧ ಸೋಲು ಕಂಡಿದೆ. ಪಾಕಿಸ್ತಾನ ಕೂಡ ಲೀಗಿನಲ್ಲಿ ದಕ್ಷಿಣ ಆಫ್ರಿಕಾ, ಶ್ರೀಲಂಕಾ ವಿರುದ್ಧ ಜಯ ಸಾಧಿಸಿದರೆ, ಭಾರತ ವಿರುದ್ಧ ಸೋತಿತ್ತು. ಹಾಗೆಯೇ ಪಾಕಿಸ್ತಾನ ಸೆಮಿಫೈನಲಿನಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ, ಭಾರತೀಯ ತಂಡ ಬಾಂಗ್ಲಾದೇಶ ತಂಡವನ್ನು ಮಣಿಸಿ ಫೈನಲಿಗೇರಿತ್ತು.

ಹಾಗಾಗಿ ಹಾಲಿ ಚಾಂಪ್ಯನ್ ಆಗಿರುವ ಭಾರತಕ್ಕೆ ಸರ್ಫರಾಜ್ ಅಹ್ಮದ್ ಸಾರಥ್ಯದ ಪಾಕಿಸ್ತಾನ ತಂಡ ಕಠಿಣ ಸವಾಲು ನೀಡುವ ಸಾಧ್ಯತೆ ಇದೆ. ಮೊದಲ ಪಂದ್ಯವನ್ನು ಸೋತಿರುವ ಪಾಕಿಸ್ತಾನ ಫೈನಲ್ ಪಂದ್ಯದಲ್ಲಿ ತಿರುಗಿ ಬೀಳುವ ಸಾಧ್ಯತೆ ಇದೆ.

ಪಾಕಿಸ್ತಾನ ತಂಡ ಭಾರತದ ವಿರುದ್ಧದ ಪಂದ್ಯವನ್ನು ಹೊರತುಪಡಿಸಿ ಉಳಿದೆಲ್ಲ ಪಂದ್ಯಗಳಲ್ಲಿ ಪ್ರಶಸ್ತಿಗೆ ಆರ್ಹವಾಗುವ ಆಟವನ್ನು ಆಡಿದೆ .

ಭಾರತೀಯ ತಂಡ ಕೂಡ ಈ ಪಂದ್ಯವನ್ನು ಗೆಲ್ಲುವ ವಿಶ್ವಾಸವನ್ನು ಹೊಂದಿದೆ. ಈ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದ ಪ್ರಯತ್ನ ಅಮೆಜಿಂಗ್. ಉತ್ಸಾಹದ ಅಲೆಯಲ್ಲಿ ತೇಲುತ್ತಿರುವ ಭಾರತ ಚಾಂಪಿಯನ್ಸ್ ಟ್ರೋಫಿ ಜಯಿಸುವ ಫೇವರಿಟ್ ತಂಡವಾಗಿದೆ. ಅಂತೂ ಕ್ರಿಕೆಟ್ ಜನಕರ ನಾಡಿನಲ್ಲಿ ಕಪಿಲ್ ದೇವ್, ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರ ಐತಿಹಾಸಿಕ ಸಾಧನೆಯ ಹೆಜ್ಜೆ ಗುರುತಿನಲ್ಲಿ ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಗೆಲ್ಲಲಿ ಎನ್ನುವುದೇ ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.