ಸರ, ದ್ವಿಚಕ್ರವಾಹನ ಕಳವು ಆರೋಪಿ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿ ಹಲವು ಕಡೆಗಳಲ್ಲಿ ನಡೆದಿದ್ದ ಸರಕಳವು, ದ್ವಿಚಕ್ರ ವಾಹನಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಡುಪಿ ಕಾರ್ಕಳ ತಾಲೂಕಿನ ಇರ್ವತ್ತೂರು ಬೈರಬೆಟ್ಟು ಮನೆಯ ಜೀವನ್ ಪೂಜಾರಿ ಯಾನೆ ಜೀವನ್ ಪಿಂಟ್ (33) ಎಂದು ಗುರುತಿಸಲಾಗಿದೆ. ಬುಧವಾರ ನಗರದ ಹಳೆ ಬಸ್ ನಿಲ್ದಾಣದ ಪರಿಸರದಲ್ಲಿ ಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದ ಈತನನ್ನು ಕಂಡ ಸಿಸಿಬಿ ಪೊಲೀಶರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಈ ಹಿಂದೆ ಹಲವು ಸರ ಕಳವು ಪ್ರಕರಣದ ಆರೋಪಿ ಎನ್ನುವುದು ಬೆಳಕಿಗೆ ಬಂದಿದೆ.

ಆರೋಪಿ ಬಿಕರ್ನಕಟ್ಟೆಯ ಜಯಶ್ರೀಗೇಟ್ ಬಳಿಯಲ್ಲಿ ನಡೆದ ಮಹಿಳೆಯ ಸರ ಕಳವು ಮಾಡಿದ ಪ್ರಕರಣದಲ್ಲಿ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದು ಬೆಳಕಿಗೆ ಬಂದಿದ್ದು, ಅವುಗಳನ್ನು ಇದೀಗ ವಶಪಡಿಸಿಕೊಳ್ಳಲಾಗಿದೆ.

2016ರ ಮಾರ್ಚ್ 29ರಂದು ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಡು ಮರೋಳಿ ದೇವಸ್ಥಾನಕ್ಕೆ ಹೋಗಿ ವಾಪಾಸು ಬಿಕರ್ನಕಟ್ಟೆ ಜಯಶ್ರೀಗೇಟ್ ಕಡೆಗೆ ರಾತ್ರಿ 9 ಗಂಟೆಯ ಸುಮಾರಿಗೆ ಪೂರ್ಣಿಮಾ ಎಂಬವರು ಮನೆಯವರ ಜೊತೆಗೆ ನಡೆದು ಹೋಗುತ್ತಿದ್ದಾಗ ಆರೋಪಿ ಅಪ್ಪಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದ.

ಆರೋಪಿಯಿಂದ 18 ಗ್ರಾಂ ತೂಕದ ಚಿನ್ನದ ಸರ, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಚಿನ್ನದ ಮೌಲ್ಯ 58,000 ರೂ ಎನ್ನಲಾಗಿದೆ. ಅಲ್ಲದೆ ಯಮಹಾ ಬೈಕ್, ಹೊಂಡಾ ಆಕ್ಟಿವಾ ವಶಪಡಿಸಿಕೊಳ್ಳಲಾಗಿದೆ.

ಈತನ ಬಳಿ ಇದ್ದ ಚಿನ್ನಾಭರಣ ಮತ್ತು ದ್ವಿಚಕ್ರ ವಾಹನಗಳನ್ನು ಈ ಹಿಂದೆ ಸರ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮೊಹಮ್ಮದ್ ರಫೀಕ್ ಎಂಬಾತ ತನ್ನ ಸಹಚರರ ಮೂಲಕ ಕಳವು ಮಾಡಿ ಈತನಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಈತನಿಂದ ವಶಪಡಿಸಿಕೊಂಡ ಒಟ್ಟು ಸೊತ್ತಿನ ಮೌಲ್ಯ 1,64,000 ರೂ ಎಂದು ಅಂದಾಜಿಸಲಾಗಿದೆ.

ಈತನ ವಿರುದ್ಧ ಕಾರ್ಕಳ ನಗರ, ಮೂಡುಬಿದಿರೆ, ಬಜಪೆ, ಉಳ್ಳಾಲ, ಮಂಜೇಶ್ವರ ಪೊಲೀಸ್ ಠಾಣೆಗಳಲ್ಲೂ ಪ್ರಕರಣ ದಾಖಲಾಗಿದೆ. ಸುಮಾರು 4 ತಿಂಗಳ ಹಿಂದೆ ಜೈಲಿನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.