ಕೇಂದ್ರದ 100 ಕೋಟಿ ರೂ ಅನುದಾನ ರಾಜ್ಯದ ಅಭಿವೃದ್ಧಿಗೆ ಬಳಕೆ : ಖಾದರ್

ಮಂಗಳೂರು : ಕೇಂದ್ರ ಸರಕಾರದ ಸೀಮೆಣ್ಣೆ ಮುಕ್ತ ಭಾರತ ನಿರ್ಮಾಣಕ್ಕೆ ರಾಜ್ಯ ಸರಕಾರ ಅಗತ್ಯ ಸಹಕಾರ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸರಬರಾಜು ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗ್ಯಾಸ್ ಸಿಲಿಂಡರ್ ಹೊಂದಿರುವ ಕುಟುಂಬಗಳಿಗೆ ಸೀಮೆ ಎಣ್ಣೆ ಸ್ಥಗಿತಗೊಳಿಸುವ ಪ್ರಕ್ರಿಯೆ ನಡೆದಿದ್ದು, ಕೇಂದ್ರ ಸರಕಾರ ಸೀಮೆಣ್ಣೆ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಪ್ರತಿ ರಾಜ್ಯದಿಂದಲೂ ಗ್ಯಾಸ್ ಸಿಲಿಂಡರ್ ಬಳಕೆದಾರರ ಹಾಗೂ ಸೀಮೆಎಣ್ಣೆ ಬಳಕೆದಾರರ ಅಂಕಿಅಂಶ ಕೇಳಿತ್ತು. ಇದಕ್ಕೆ ರಾಜ್ಯ ಸರಕಾರ ತಕ್ಷಣ ಸ್ಪಂದಿಸಿದ ಪರಿಣಾಮ ಕೇಂದ್ರ ಸರಕಾರ ಸ್ಥಗಿತಗೊಂಡ ಸೀಮೆಣ್ಣೆ ಪೂರೈಕೆಗೆ ಬದಲಾಗಿ ರಾಜ್ಯಕ್ಕೆ ರೂ ನೂರು ಕೋಟಿಯಷ್ಟು ಅನುದಾನ ಒದಗಿಸಿದ್ದು ಇದನ್ನು ರಾಜ್ಯದ ಅಭಿವೃದ್ಧಿಗಾಗಿ ಬಳಕೆ ಮಾಡಲಿದ್ದೇವೆ ಎಂದು ತಿಳಿಸಿದರು.