ಗೊತ್ತುಗುರಿ ಇಲ್ಲದ ಕೇಂದ್ರದ ಡಿಜಿಟಲ್ ಬ್ಯಾಂಕಿಂಗ್ ನೀತಿ

ಸಾಕಷ್ಟು ಸಿದ್ಧತೆ ಇಲ್ಲದೆ ಏಕಾಏಕಿ ಕ್ಯಾಶ್ ಲೆಸ್ ಆರ್ಥಿಕ ವ್ಯವಸ್ಥೆಗೆ ಹೋಗಿ ಎಂದಿರುವ ಕೇಂದ್ರ ಸರಕಾರಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತು ಬ್ಯಾಂಕಿಂಗ್ ಸೇವೆಯಲ್ಲಿ ಬಹಳಷ್ಟು ಮಂದುವರಿದಿರುವ ಕರಾವಳಿ ಜಿಲ್ಲೆಗಳಲ್ಲೇ ತೊಡಕಾಗಿದೆ.

ವಿಶೇಷ ವರದಿ 

ಮಂಗಳೂರು : ಟೆಲಿಕಾಂ ಕ್ಷೇತ್ರದಲ್ಲಿ ತುಂಬಾ ಮುಂದುವರಿದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾಶ್ ಲೆಸ್ ಡಿಜಿಟಲ್ ಬ್ಯಾಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಇಂಟರ್ನೆಟ್ ಸೇವಾ ಕೊರತೆ ಒಂದೆಡೆ ಸಮಸ್ಯೆಯಾದರೆ, ಇನ್ನೊಂದೆಡೆ ಬ್ಯಾಂಕಿಂಗ್ ಕಾರ್ಡ್ ಸ್ವೈಪಿಂಗ್ ಯಂತ್ರಗಳ ಅಭಾವ ಉಂಟಾಗಿದೆ.

ಡಿಜಿಟಲ್ ಬ್ಯಾಕಿಂಗ್ ಮೂಲಕ ನೋಟುಗಳ ಅವಲಂಬನೆ ತಪ್ಪಿಸುವ ಆಶಯವನ್ನು ಕೇಂದ್ರ ಸರಕಾರ ಹೊಂದಿರುವುದು ನಿಜ. ಆದರೆ, ಸಾಕಷ್ಟು ಸಿದ್ಧತೆ ಇಲ್ಲದೆ ಏಕಾಏಕಿ ಕ್ಯಾಶ್ ಲೆಸ್ ಆರ್ಥಿಕ ವ್ಯವಸ್ಥೆಗೆ ಹೋಗಿ ಎಂದಿರುವ ಕೇಂದ್ರ ಸರಕಾರಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ ಮತ್ತು ಬ್ಯಾಂಕಿಂಗ್ ಸೇವೆಯಲ್ಲಿ ಬಹಳಷ್ಟು ಮಂದುವರಿದಿರುವ ಕರಾವಳಿ ಜಿಲ್ಲೆಗಳಲ್ಲೇ ತೊಡಕಾಗಿದೆ.

ಮಂಗಳೂರಿನ ಕೆಲವು ಸಣ್ಣ-ಪುಟ್ಟ ಹಾಗೂ ದೊಡ್ಡ ಉದ್ದಿಮೆಗಳು ಕೂಡ ಸ್ವೈಪಿಂಗ್ ಮಷಿನ್ ಹೊಂದಲು ಸಿದ್ಧರಾಗಿದ್ದಾರೆ. ಆದರೆ, ಮೂಲಭೂತ ಸೌಕರ್ಯಗಳ ಕೊರತೆ ವ್ಯಾಪಾರಿ ವರ್ಗವನ್ನು ಕಾಡುತ್ತಿದೆ. ಸರಕಾರ 500, 1000 ರೂ ನೋಟುಗಳನ್ನು ಅಮಾನ್ಯ ಮಾಡಿದ ಬಳಿಕ ಚಿಲ್ಲರೆ ಸಮಸ್ಯೆಗಳು ಶ್ರೀಸಾಮಾನ್ಯರನ್ನು ಮಾತ್ರ ಅಲ್ಲ ವ್ಯಾಪಾರಿಗಳನ್ನು ಕೂಡ ಕಂಗಾಲು ಮಾಡಿದೆ. ಹೊಸ ಎರಡು ಸಾವಿರದ ನೋಟು ಇನ್ನೊಂದು ಸಮಸ್ಯೆಯೇ ಹೊರತು ಪರಿಹಾರ ಆಗಲಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ವ್ಯಾಪಾರಿಗಳು ಕೂಡ ಕ್ಯಾಶ್ ಲೆಸ್ ವ್ಯವಸ್ಥೆಗೆ ಮುಂದಾದಾಗ ಸಮಸ್ಯೆ ಆಗಿರುವುದು ಇಂಟರನೆಟ್ ಸೇವೆಯ ಗುಣಮಟ್ಟ.

ಮೊಬೈಲ್ ಮೂಲಕ ಬ್ಯಾಂಕಿಂಗ್ ವ್ಯವಹಾರ ಮಾಡಲು ಮತ್ತು ಬ್ಯಾಂಕಿಂಗ್ ಕಾರ್ಡ್ ಸ್ವೈಪಿಂಗ್ ಮಷಿನ್ ಕೆಲಸ ಮಾಡಲು ಇಂಟರನೆಟ್ ಸೌಲಭ್ಯ ಬೇಕು. ಆದರೆ, ಇತ್ತೀಚಿಗಿನ ದಿನಗಳಲ್ಲಿ ಇಂಟರನೆಟ್ ಸ್ಪೀಡ್ ಮತ್ತು ಗುಣಮಟ್ಟ ಬಹುವಾಗಿ ಕುಸಿದಿದೆ ಎನ್ನುತ್ತಾರೆ ವ್ಯಾಪಾರಿಗಳು. ಸ್ವೈಪಿಂಗ್ ಮಷಿನ್ ಇಟ್ಟುಕೊಂಡರು ಕೆಲವೊಮ್ಮೆ ವ್ಯವಹಾರ ಸರಿಯಾಗಿ ಆಗುವುದಿಲ್ಲ. ಗ್ರಾಹಕರ ಖಾತೆಯಿಂದ ಹಣ ಹೋಗಿರುತ್ತದೆ. ನಮ್ಮ ಖಾತೆಗೆ ಹಣ ಬಂದಿರುವುದಿಲ್ಲ. ಹೀಗೆ ವಯರಿನಲ್ಲಿ ಮಾಯವಾಗುವ ಹಣವನ್ನು ಮತ್ತೆ ಪಡೆಯಲು ಎರಡು ದಿನ ಕಾಯಬೇಕು. ಗ್ರಾಹಕರ ಬೈಗುಳ ತಿನ್ನಬೇಕಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ಕೇಂದ್ರ ಸರಕಾರದ ನೋಟು ನಿಷೇಧದ ಬಳಿಕವಂತೂ ವ್ಯಾಪಾರಕ್ಕೆ ಸಾಕಷ್ಟು ಹೊಡೆತ ಬಿದ್ದಿದೆ. ಎಲ್ಲರಿಗೂ ಚಿಲ್ಲರೆ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಜನರು ಎರಡು ಸಾವಿರದ ನೋಟುಗಳನ್ನೇ ನೀಡುತ್ತಿದ್ದರು. ಚಿಲ್ಲರೆ ಇಲ್ಲ ಎಂದಾಗ ಮತ್ತೆ ಕೊಡುತ್ತೇನೆ ಎಂದು ಹೇಳಿ ಹೋಗುತ್ತಿದ್ದರು. ಇಂತಹ ಕಾರಣಗಳಿಗಾಗಿ ಬಹಳಷ್ಟು ಮಂದಿ ಸ್ವೈಪಿಂಗ್ ಮಷಿನ್ ಬೇಕೆಂದು ಬ್ಯಾಂಕುಗಳಿಗೆ ಮನವಿ ಮಾಡಿದ್ದಾರೆ. ಆದರೆ, ಸ್ವೈಪಿಂಗ್ ಮಷಿನ್ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ತುಂಬಾ ಹೆಚ್ಚಾಗಿದೆ. ಕೇಂದ್ರ ಸರಕಾರ ಏಕಾಏ ಹೊಸ ನೀತಿ ಪ್ರಕಟಿಸಿದ ಪರಿಣಾಮ ಮಷಿನ್ ತಯಾರಿಸಿ ವಿತರಿಸಲು ಸಾಧ್ಯವಾಗುತ್ತಿಲ್ಲ.

ನೋಟಿನ ಕೊರತೆ ಸಮಸ್ಯೆ ಸದ್ಯಕ್ಕೆ ಮುಗಿಯುವುದಿಲ್ಲ ಎಂಬ ಕಾರಣದಿಂದ ಡಿಜಿಟಲ್ ಬ್ಯಾಕಿಂಗ್ ಕಡೆಗೆ ಅನಿವಾರ್ಯವಾಗಿ ವ್ಯಾಪಾರಿಗಳು ವಾಲಿದ್ದಾರೆ. ಸ್ವೈಪಿಂಗ್ ಮಷಿನ್ ದೊರೆಯದಿದ್ದಾಗ ಪೇಟಿಎಂ ಹಾಗೂ ಎಸ್ ಬಿ ಐ ಆಪ್ ಇತ್ಯಾದಿಗಳನ್ನು ಅಳವಡಿಸಿಕೊಂಡಿದ್ದಾರೆ. ಮೊಬೈಲ್ ಮೂಲಕ ಇಂಟರನೆಟ್ ಬಳಸಿ ಈ ವ್ಯವಹಾರ ಮಾಡಬೇಕಾಗಿದ್ದು, ಕೇವಲ ಅನುಭವ ಇದ್ದವರು ಮಾತ್ರ ಇಂತಹ ಅಪ್ ಉಪಯೋಗಿಸುತ್ತಾರೆ ಎನ್ನುತ್ತಾರೆ ವ್ಯಾಪಾರಿಗಳು.

ಕರಾವಳಿಯಲ್ಲಿ ಇನ್ನೊಂದು ದೊಡ್ಡ ಪ್ರಮಾಣದ ವ್ಯಾಪಾರಿಗಳು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಸಿದ್ಧರಾಗಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಅವರ ಎಲ್ಲ ವ್ಯವಹಾರಗಳು ಸರಕಾರಕ್ಕೆ ಗೊತ್ತಾಗುವುದರಿಂದ ದೊಡ್ಡ ಮೊತ್ತದ ತೆರಿಗೆ ಪಾವತಿಸಬೇಕಾಗುತ್ತದೆ. ಇಂತಹವರಲ್ಲಿ ದೇಶಭಕ್ತ ವ್ಯಾಪಾರಿಗಳ ಸಂಖ್ಯೆಯೇ ದೊಡ್ಡದು.

ಕರಾವಳಿಯಲ್ಲಿ ವಾರ್ಷಿಕ ನೂರು ಕೋಟಿ ರೂಪಾಯಿತನಕ ವಹಿವಾಟು ನಡೆಸುವ ಪ್ರಕಾಶ್ ಶೆಟ್ಟಿಯವರ ಕೋಸ್ಟಲ್ ಚಿಕನ್ಸ್ ತನ್ನೆಲ್ಲ ಚಿಲ್ಲರೆ ಅಂಗಡಿಗಳಲ್ಲಿ ಸ್ವೈಪಿಂಗ್ ಮಷಿನ್ ಇರಿಸಿಕೊಂಡಿರುವುದಲ್ಲದೆ, ಬಹುಪಾಲು ಹಣಕಾಸು ವಹಿವಾಟು ಡಿಜಿಟಲ್ ಬ್ಯಾಂಕಿಂಗ್ ಮೂಲಕ ನಡೆಸುತ್ತಿದೆ. ಇಂತಹ ಉದ್ಯಮಗಳ ಸಂಖ್ಯೆ ತೀರ ಕಡಿಮೆ ಇದ್ದರೂ, ಡಿಜಿಟಲ್ ವ್ಯವಹಾರದಿಂದ ಅದರದ್ದೇ ಆದ ಪ್ರಯೋಜನಗಳು ಕೂಡ ಇವೆ.