ಜಾನುವಾರು ಮಾರಾಟ ನಿಯಮ ಸಡಿಲಿಸಲಿರುವ ಕೇಂದ್ರ ಸರ್ಕಾರ

ಸಾಂದರ್ಭಿಕ ಚಿತ್ರ

ದೇಶಾದ್ಯಂತ ಪ್ರತಿಭಟನೆ, ಹೋರಾಟ ಮತ್ತು ಹಿಂಸಾತ್ಮಕ ಚಟುವಟಿಕೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಜಾನುವಾರು ಮಾರಾಟ ಕಾಯ್ದೆಯ ನಿಯಮಗಳನ್ನು ರದ್ದುಪಡಿಸಲು ಯೋಚಿಸುತ್ತಿದೆ. ಕೇರಳ, ಈಶಾನ್ಯ ರಾಜ್ಯಗಳು ಮತ್ತು ತೆಲಂಗಾಣ ರಾಜ್ಯಗಳಲ್ಲಿ ನೆಲೆಯೂರಲು ಬಯಸುತ್ತಿರುವ ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟಕ್ಕೆ, ಜಾನುವಾರು ಮಾರುಕಟ್ಟೆಯಲ್ಲಿ ಹತ್ಯೆಗಾಗಿ ಜಾನುವಾರುಗಳನ್ನು ಮಾರುವಂತಿಲ್ಲ ಎಂಬ ಕಾಯ್ದೆ ಸಾಕಷ್ಟು ಹಿನ್ನಡೆ ಉಂಟುಮಾಡುತ್ತಿದೆ. ಕೇವಲ ಜಾನುವಾರುಗಳಿಗೆ ಮಾತ್ರವೇ ಯಾವುದೇ ತರ್ಕವಿಲ್ಲದೆ ವಿಶೇಷ ಸ್ಥಾನ ನೀಡುವ ಮೂಲಕ ಈ ಕಾಯ್ದೆ ಸಂವಿಧಾನ ವಿಧಿ 14ನ್ನು ಉಲ್ಲಂಘಿಸುತ್ತಿದೆ ಎಂಬ ಅಭಿಪ್ರಾಯ ಎನ್ಡಿಎ ನಾಯಕರಲ್ಲಿ ಮೂಡಿರುವುದು ಸರ್ಕಾರದ ನಿರ್ಧಾರಕ್ಕೆ ಕಾರಣವಾಗಿದೆ.

ಪ್ರಾಣಿ ದೌರ್ಜನ್ಯ ಕಾಯ್ದೆಯಲ್ಲಿ ಎಲ್ಲಿಯೂ ಪ್ರಾಣಿಗಳ ಹತ್ಯೆಯನ್ನು ನಿಷೇಧಿಸಲಾಗಿಲ್ಲವಾದ್ದರಿಂದ ಈ ನೂತನ ಕಾಯ್ದೆ ಕಾನೂನಾತ್ಮಕವಾಗಿ ಅಸಿಂಧುವಾಗುತ್ತದೆ ಎಂಬ ಅಭಿಪ್ರಾಯ ಪಕ್ಷದಲ್ಲಿ ದಟ್ಟವಾಗಿದೆ. ಮೇಲಾಗಿ ವಿಶ್ವಮಟ್ಟದ ನಾಯಕರಾಗಿ ಹೊರಹೊಮ್ಮಲು ಕಸರತ್ತು ನಡೆಸುತ್ತಿರುವ ನರೇಂದ್ರ ಮೋದಿಯ ವರ್ಚಸ್ಸಿಗೆ ಧಕ್ಕೆ ಬರುವಂತೆ ಗೋರಕ್ಷಕರು ದೇಶಾದ್ಯಂತ ದೌರ್ಜನ್ಯ ನಡೆಸುತ್ತಿರುವುದು ಕೇಂದ್ರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ.

ಈ ನಿಯಮಗಳು ಜಾರಿಯಾದ ನಂತರ ಗೋರಕ್ಷಕರ ಹಲ್ಲೆಗಳು ಹೆಚ್ಚಾಗುತ್ತಿರುವುದು ಸರ್ಕಾರವನ್ನು ಕಂಗೆಡಿಸಿದೆ. ಪಕ್ಷದೊಳಗಿನ ಈ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲೇ ಮೇಘಾಲಯದ ಬಿಜೆಪಿ ಸದಸ್ಯರು ರಾಜೀನಾಮೆ ನೀಡಿರುವುದು ಮತ್ತು ಇನ್ನು ಕೆಲವರು ಪಕ್ಷದ ಹೈಕಮಾಂಡಿಗೆ ಎಚ್ಚರಿಕೆ ನೀಡಿರುವುದು ಪಕ್ಷವನ್ನು ಎಚ್ಚರಿಸಿರುವುದು ಸ್ಪಷ್ಟ. ಇದೇ ನಿಯಮಗಳನ್ನು ಅನುಸರಿಸಿದರೆ ಬಹುಶಃ ಬಿಜೆಪಿ ದಕ್ಷಿಣ ಮತ್ತು ಈಶಾನ್ಯ ರಾಜ್ಯಗಳಲ್ಲಿ ನೆಲೆ ಕಾಣಲು ಸಾಧ್ಯವಿಲ್ಲ ಎಂದು ಖಾತ್ರಿಯಾಗಿರುವುದರಿಂದ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಲು ಉದ್ದೇಶಿಸಿದೆ.