ಪೊಂಗಲ್ ಹಬ್ಬದ ವೇಳೆ ತ ನಾ ಜನತೆಗೆ ಜಲ್ಲಿಕಟ್ಟು ಉಡುಗೊರೆ ನೀಡಲಿರುವ ಕೇಂದ್ರ

ಕೇಂದ್ರ ಸರಕಾರ ಅಧ್ಯಾಧೇಶದ ಮೂಲಕ ಜಲ್ಲಿಕಟ್ಟು ಕ್ರೀಡೆಯನ್ನು ಪೊಂಗಲ್ ಹಬ್ಬಕ್ಕಿಂತ ಮುಂಚಿತವಾಗಿಯೇ ಅನುಮತಿಸಿ ಜನತೆಗೆ ಪೊಂಗಲ್ ಉಡುಗೊರೆಯೆಂದು ಇದನ್ನು ಬಿಂಬಿಸಬಹುದು.

  • ಟಿ ಎಸ್ ಸುಧೀರ್

ಈ ಪೊಂಗಲ್ ಸಂದರ್ಭ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಕ್ರೀಡೆ ಮತ್ತೆ ಆರಂಭವಾಗಬಹುದೇ ? ಸರಕಾರ ಇತ್ತೀಚೆಗೆ ಕೈಗೊಂಡ ಕ್ರಮಗಳನ್ನು ಗಣನೆಗೆ ತೆಗೆದುಕೊಂಡಿದ್ದೇ ಆದಲ್ಲಿ ಈ ಕ್ರೀಡೆಯ ಬೆಂಬಲಿಗರು ಬಹಳಷ್ಟು ಆಶಾವಾದದಿಂದಿದ್ದಾರೆಂದೇ ಹೇಳಬಹುದು.

ಆದರೆ ಜಲ್ಲಿಕಟ್ಟು ಕ್ರೀಡೆಗೆ ಮತ್ತೆ ಅನುಮತಿ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕಿರುವ ಪ್ರಮುಖ ತೊಡಕೆಂದರೆ ಭಾರತೀಯ ಪ್ರಾಣಿ ದಯಾ ಮಂಡಳಿ. 1962ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂವಿಧಾನದತ್ತ ಸಂಸ್ಥೆಯ ಸದಸ್ಯರನ್ನು ಕೇಂದ್ರ ಪರಿಸರ ಸಚಿವಾಲಯ ನೇಮಕ ಮಾಡುವುದಾದರೂ ಅದು ದೃಢ ನಿಲುವು ಹೊಂದಿದ ಸಂಸ್ಥೆಯಾಗಿದೆಯಲ್ಲದೆ ಕಳೆದೈದು ದಶಕಗಳಿಂದ ಪ್ರಾಣಿ ಕಲ್ಯಾಣ ವಿಚಾರದಲ್ಲಿ ಪ್ರಮುಖವಾಗಿ ದನಿಯೆತ್ತುವ ಸಂಸ್ಥೆಯಾಗಿದೆ. ಕಳೆದ ಜನವರಿ 7ರಂದು ಪ್ರಕಾಶ್ ಜಾವೇಡ್ಕರ್ ನೇತೃತ್ವದ ಪರಿಸರ ಸಚಿವಾಲಯ ಜಲ್ಲಿಕಟ್ಟು ಅನುಮತಿಸುವ ಕುರಿತು ಅಧಿಸೂಚನೆ ಜಾರಿಗೊಳಿಸಲು ಮುಂದಾದಾಗ ಮಂಡಳಿ ಅದನ್ನು ವಿರೋಧಿಸಿ ನ್ಯಾಯಾಲಯದ ಕದ ತಟ್ಟಿದ್ದು, ಕೇಂದ್ರ ಸರಕಾರದ ಅಸಮಾಧಾನಕ್ಕೆ ಕಾರಣವಾಗಿತ್ತು. ಕೇಂದ್ರ ಈ ಸಂಬಂಧ ಮಂಡಳಿಗೆ ಶೋಕಾಸ್ ನೊಟೀಸ್ ಜಾರಿಗೊಳಿಸಿದಾಗ ಮಂಡಳಿ ಅದನ್ನು ರದ್ದುಗೊಳಿಸುವಂತೆ ಕೋರಿ ಮತ್ತೆ ಸುಪ್ರೀಂ ಕೋರ್ಟ್ ಕದ ತಟ್ಟಿತ್ತಲ್ಲದೆ ಕೇಂದ್ರ ಬಲವಂತದ ಕ್ರಮ ಕೈಗೊಳ್ಳದಂತೆ ಹಾಗೂ ಮಂಡಳಿ ಫೆಬ್ರವರಿ 2017ರ ತನಕದ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲು ಅನುವು ಮಾಡಿಕೊಡುವಂತೆ ಕೋರಿತ್ತು.

ಇದೀಗ ಪೊಂಗಲ್ ಹಬ್ಬಕ್ಕೆ ಕೆಲವೇ ವಾರಗಳಿವೆಯೆಂದಿರುವಾಗ ಸರಕಾರ ತನ್ನ ಕಾರ್ಯ ಸಾಧಿಸಲು ಮುಂದಾಗಿದೆ. ಮಂಡಳಿಯ ಅಧ್ಯಕ್ಷ ಮೇಜರ್ ಜನರಲ್ ಡಾ ಆರ್ ಎಂ ಖರ್ಬ್ ಅಧಿಕಾರಾವಧಿ ಕೊನೆಗೊಳ್ಳಲು ಇನ್ನೂ ಎರಡು ತಿಂಗಳಿರುವಾಗಲೇ ಅವರು ಡಿಸೆಂಬರ್ 23ರಂದು ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಗೂ ಜಲ್ಲಿಕಟ್ಟು ಕ್ರೀಡೆಗೂ ಸಂಬಂಧವಿದೆಯೆಂದು ಹಲವರು ಅಂದುಕೊಂಡಿದ್ದಾರೆ. ಖರ್ಬ್ ಅವರ ಬದಲು ಪರಿಸರ ಸಚಿವಾಲಯದ ವಿಶೇಷ ಕಾರ್ಯದರ್ಶಿ ಎಸ್ ಎಸ್ ನೇಗಿ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ತಮ್ಮ ಸಹೋದ್ಯೋಗಿಗಳಿಗೆ ಕಳುಹಿಸಿದ ಇಮೇಲಿನಲ್ಲಿ ಖರ್ಬ್ ಅವರು ತಮ್ಮ ರಾಜೀನಾಮಗೆ ಆರೋಗ್ಯ ಸಮಸ್ಯೆಯ ನೆಪ ಹೇಳಿದ್ದರೂ ಇತ್ತೀಚಿಗಿನ ದಿನಗಳಲ್ಲಿ ಅಧ್ಯಕ್ಷ ಹುದ್ದೆ ಕಾರ್ಯನಿರ್ವಹಿಸುವುದು ತಮಗೆ ಅಷ್ಟು ಸಮಾಧಾನ ತಂದಿಲ್ಲ ಎಂದಿದ್ದರು. ಜಲ್ಲಿಕಟ್ಟು ವಿರುದ್ಧದ ತಮ್ಮ ನಿಲುವಿಗೆ ಅಂಟಿಕೊಂಡಿದ್ದ ಖರ್ಬ್ ಅವರಾಗಿಯೇ ರಾಜೀನಾಮೆ ನೀಡಿರಲಿಕ್ಕಿಲ್ಲ ಎಂಬುದು ಹಲವರ ಅಂಬೋಣ.

ಮಂಡಳಿ ಸರಕಾರದ ನಿರ್ಧಾರದ ವಿರುದ್ಧ ನ್ಯಾಯಾಲಯದ ಮೊರೆ ಹೋದಂದಿನಿಂದ ಅಧ್ಯಕ್ಷರನ್ನು ಹೊರದಬ್ಬುವ ಪ್ರಯತ್ನ ಆರಂಭವಾಗಿತ್ತು. 2012 ಹಾಗೂ 2015ರ ನಡುವೆ ಮಂಡಳಿಯ ಕಾರ್ಯನಿರ್ವಹಣೆಯನ್ನು ಅವಲೋಕಿಸಲು ಸಚಿವಾಲಯ ಆಡಿಟ್ ವರದಿ ಸಿಧ್ಧಪಡಿಸಲು ಆದೇಶಿಸಿತ್ತು ಹಾಗೂ ಮಂಡಳಿಯ ಹಲವು ಸದಸ್ಯರು ತಮ್ಮ ಸಂಘಟನೆಗಳಿಗೆ ಅನುಕೂಲಕರವಾದ ಕ್ರಮ ಕೈಗೊಂಡಿದ್ದಾರೆಂದು ವರದಿ ಹೇಳಿತ್ತು. ಗುರುಗ್ರಾಮದಲ್ಲಿರುವ ಮಂಡಳಿ ಕಚೇರಿಯಲ್ಲಿನ ಖರ್ಚು ವೆಚ್ಚಗಳನ್ನೂ ವರದಿಯಲ್ಲಿ ಪ್ರಶ್ನಿಸಿರುವುದು ಸದಸ್ಯರಿಗೆ ಮುಜುಗರ ತಂದಿತ್ತು.

ಅತ್ತ ತಮಿಳುನಾಡಿನ ಇತರ ಪಕ್ಷಗಳಂತೆಯೇ ಬಿಜೆಪಿ ಕೂಡ ಜಲ್ಲಿಕಟ್ಟು ಕ್ರೀಡೆಯ ಪರವಾಗಿದೆ. ಇದೀಗ ಜಯಲಲಿತಾ ಸಾವಿನ ನಂತರ ಎಐಎಡಿಎಂಕೆ ಹಿಂದಿನಷ್ಟು ಪ್ರಬಲವಾಗಿಲ್ಲದೇ ಇರುವುದರಿಂದ ಜಲ್ಲಿಕಟ್ಟನ್ನು ಮತ್ತೆ ಅನುಮತಿಸಿ ಪೊಂಗಲ್ ಸಮಯ ಜನರ ಮನ ಗೆಲ್ಲಲು ಯತ್ನಿಸುವ ಉದ್ದೇಶ ಬಿಜೆಪಿಗಿದೆ. ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ಸಿಕ್ಕಿದ್ದೇ ಆದರೆ ಅದಕ್ಕೆ ತಾನೇ ಕಾರಣವೆಂದು ಬಿಜೆಪಿ ಹೇಳದೇ ಇರದು.

ಜಲ್ಲಿಕಟ್ಟಿಗೆ ಸಂಬಂಧಿಸಿದಂತೆ 2014ರ ತೀರ್ಪನ್ನು ಪುನರ್ ಪರಿಶೀಲಿಸುವಂತೆ ತಮಿಳುನಾಡು ಸರಕಾರ ಮಾಡಿದ ಅಪೀಲನ್ನು ನ್ಯಾಯಾಲಯ ನವೆಂಬರ್ ತಿಂಗಳಲ್ಲಿ ತಿರಸ್ಕರಿಸಿದೆ. ನ್ಯಾಯಾಲಯ ತನ್ನ ನಿರ್ಧಾರವನ್ನು ಬದಲಿಸದೇ ಇದ್ದರೂ ಕೇಂದ್ರ ಸರಕಾರ ಅಧ್ಯಾಧೇಶದ ಮೂಲಕ ಜಲ್ಲಿಕಟ್ಟು ಕ್ರೀಡೆಯನ್ನು ಪೊಂಗಲ್ ಹಬ್ಬಕ್ಕಿಂತ ಮುಂಚಿತವಾಗಿಯೇ ಅನುಮತಿಸಿ ಜನತೆಗೆ ಪೊಂಗಲ್ ಉಡುಗೊರೆಯೆಂದು ಇದನ್ನು ಬಿಂಬಿಸಬಹುದು. ಇನ್ನೊಂದು ವಿಧದಲ್ಲಿ ಈ ಕ್ರಮ ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳ ಪ್ರಾಬಲ್ಯಕ್ಕೆ ಸವಾಲೊಡ್ಡಲು ಸಹಕಾರಿ ಎಂಬ ಮುಂದಾಲೋಚನೆಯೂ ಇದೆ.