ಗಣಿ ಉದ್ಯಮಿಗಳಿಗಾಗಿ ಆದಿವಾಸಿಗಳ ಹಕ್ಕು ಕಸಿದ ಕೇಂದ್ರ

ಅರಣ್ಯ ಭೂಮಿಯನ್ನು ಗುತ್ತಿಗೆ ನೀಡುವ ಮುನ್ನ ಆದಿವಾಸಿಗಳ ಹಕ್ಕುಗಳಿಗೆ ಅನುಸಾರವಾಗಿ ಆದಿವಾಸಿ ಸಮಿತಿಗಳ ಸಮ್ಮತಿಯನ್ನು ಪಡೆಯುವುದು ಕಡ್ಡಾಯವಾಗಿದ್ದರೂ ಕೇಂದ್ರ ಸರ್ಕಾರ ಈ ನಿಯಮವನ್ನೂ ಉಲ್ಲಂಘಿಸಿ, ಆದಿವಾಸಿ ಸಮಿತಿಯ ಸಮ್ಮತಿಯನ್ನು ಗಣಿಗಾರಿಕೆ ಆರಂಭಿಸುವ ಮುನ್ನ ಪಡೆದರೆ ಸಾಕು, ಗುತ್ತಿಗೆ ಪಡೆಯುವ ಮುನ್ನ ಬೇಕಿಲ್ಲ ಎಂದು ತೀರ್ಮಾನಿಸಿದೆ.

  • ನಿತಿನ್ ಸೇಠ್

ದೇಶದ 130ಕ್ಕೂ ಹೆಚ್ಚು ಗಣಿಗಳನ್ನು ಪುನಃ ಹರಾಜು ಪ್ರಕ್ರಿಯೆಗೊಳಪಡಿಸಲು ಅನುಕೂಲವಾಗುವಂತೆ ಎನ್ ಡಿ ಎ ಸರ್ಕಾರ ದೇಶದ ಆದಿವಾಸಿಗಳ ಹಕ್ಕುಗಳು ಮತ್ತು ಅರಣ್ಯ ಹಾಗೂ ಪರಿಸರ ರಕ್ಷಣೆಯ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ನೀತಿ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಕೇಂದ್ರ ಪರಿಸರ ಸಚಿವಾಲಯ, ಆದಿವಾಸಿ ವ್ಯವಹಾರಗಳ ಸಚಿವಾಲಯ ಮತ್ತು ಗಣಿ ಸಚಿವಾಲಯದ ಆದೇಶದ ಮೇರೆಗೆ ತಿದ್ದುಪಡಿ ಮಾಡಲಾಗಿರುವುದು ಲಭ್ಯ ಮಾಹಿತಿಗಳಿಂದ ಸ್ಪಷ್ಟವಾಗಿದೆ.

ದೇಶದ ಬೊಕ್ಕಸಕ್ಕೆ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2015ರಲ್ಲಿ ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ನೂತನ ತಿದ್ದುಪಡಿಯ ಅನ್ವಯ ಸೆಕ್ಷನ್ 10(2) ಅಡಿಯಲ್ಲಿ ಯಾವುದೇ ಗಣಿ ಉದ್ಯಮ ಈಗಾಗಲೇ ಗಣಿಗಾರಿಕೆಗೆ ಸ್ಥಳಶೋಧನೆಯ ಪರವಾನಗಿ ಪಡೆದಿದ್ದರೆ ಅವರಿಗೆ ಪುನಃ ಗಣಿಗಾರಿಕೆಯ ಪರವಾನಗಿಯನ್ನು ನೀಡಲಾಗುತ್ತದೆ. ಈ ತಿದ್ದುಪಡಿಯ ಅನ್ವಯ ದೇಶದ 12 ರಾಜ್ಯಗಳ 317 ಗಣಿಗಳನ್ನು ಹರಾಜು ಪ್ರಕ್ರಿಯೆಯಿಂದ ತಪ್ಪಿಸಬಹುದಾಗಿದೆ.

97 ಗಣಿ ಉದ್ಯಮಿಗಳು ತಮ್ಮ ಪರವಾನಗಿಯನ್ನು ನವೀಕರಿಸುವ ಯಾವುದೇ ಪ್ರಯತ್ನ ಮಾಡಿಲ್ಲವಾದ್ದರಿಂದ ಅರ್ಜಿ ತಿರಸ್ಕøತವಾಗುತ್ತದೆ ಮತ್ತು 138 ಉದ್ಯಮಿಗಳು ಪರಿಸರ, ಅರಣ್ಯ ಮತ್ತು ಆದಿವಾಸಿ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆಯಬೇಕಿದೆ ಎಂದು ಗಣಿ ಸಚಿವಾಲಯ ಹೇಳಿದೆ.

ಈ 138 ಗಣಿಗಳು ಸಾವಿರಾರು ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು ಅರಣ್ಯ ಮತ್ತು ಪರಿಸರ ಸಚಿವಾಲಯದ ನಿರಪೇಕ್ಷಣಾ ಪತ್ರಕ್ಕಾಗಿ ಕಾಯುತ್ತಿವೆ. ಆದರೆ ಈ ಗಣಿಗಾರಿಕೆಯನ್ನು ಮುಂದುವರೆಸಲು ಅರಣ್ಯಗಳಲ್ಲಿ ನೆಲೆಸಿರುವ ಆದಿವಾಸಿಗಳ ಸ್ಥಳೀಯ ಸಮಿತಿಗಳು ತಮ್ಮ ಸಮ್ಮತಿ ಸೂಚಿಸಿ ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ಪರಿಹಾರ ಧನ ಪಡೆಯುವುದು ಅಗತ್ಯ. ಹಾಗಾಗಿ ಗಣಿಗಾರಿಕೆಯ ಸ್ಥಳಶೋಧನೆಯ ಪರವಾನಗಿಯನ್ನು ಹೊಂದಿರುವ ಉದ್ಯಮಗಳೂ ಸಹ 2017ರ ಜನವರಿ 12ರ ಒಳಗಾಗಿ ಆದಿವಾಸಿ ಸಮುದಾಯಗಳ ಸಮ್ಮತಿ ಮತ್ತು ಪರಿಸರ ಇಲಾಖೆಯ ನಿರಪೇಕ್ಷಣೆ ಪಡೆಯುವುದು ಅಗತ್ಯವಾಗಿರುತ್ತದೆ.

ಆದರೆ ಸಚಿವಾಲಯದ ಮಾಹಿತಿಯ ಪ್ರಕಾರ ಏಪ್ರಿಲ್ 1, 2015ರ ವೇಳೆಗೇ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ತನ್ನ ನಿಯಮಗಳನ್ನು ತಿದ್ದುಪಡಿ ಮಾಡಿ ಹರಾಜು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಉದ್ಯಮಿಗಳಿಗೆ ಅವಕಾಶ ಕಲ್ಪಿಸಿದೆ. ತನ್ನ ಆದೇಶದಲ್ಲಿ ಕೇಂದ್ರ ಸರ್ಕಾರ ಅರಣ್ಯ ಪ್ರದೇಶವನ್ನು ಎಲ್ಲ ಗಣಿ ಉದ್ಯಮಿಗಳಿಗೂ ಪರಭಾರೆ ಮಾಡುವುದಾಗಿ ಘೋಷಿಸಿದ್ದು ಅರಣ್ಯ ಇಲಾಖೆಯ ಅನುಮತಿ ಕಡ್ಡಾಂiÀiವಾಗಿ ಪಡೆಯತಕ್ಕದ್ದು ಎಂದು ಹೇಳಿದೆ.  ಅರಣ್ಯ ಪ್ರದೇಶವನ್ನು ಪರಭಾರೆ ಮಾಡಿದ ಮಾತ್ರಕ್ಕೆ ಮರಗಳನ್ನು ಕಡಿಯುವ ಹಕ್ಕು ಉದ್ಯಮಿಗಳಿಗೆ ಇರುವುದಿಲ್ಲ. ಆದರೆ ಯಾವುದೇ ಅರಣ್ಯ ಪ್ರದೇಶವಾದರೂ ಸುಂಕ ಪಾವತಿಸುವ ಮೂಲಕ ಉದ್ಯಮಿಗಳು ಮರ ಕಡಿಯಲು ಮುಂದಾಗುವ ಸಾಧ್ಯತೆಗಳಿವೆ.

ಈ ಹಿಂದೆ ಮರಗಳನ್ನು ಕಡಿಯುವ ಪ್ರಕ್ರಿಯೆಗೆ ಚಾಲನೆ ದೊರೆತ ನಂತರವೇ ಸುಂಕ ವಸೂಲಿ ಮಾಡಲಾಗುತ್ತಿತ್ತು. ಆದರೆ ಮರ ಕಡಿಯದೆ ಇದ್ದಲ್ಲಿ ಪಾವತಿಸಿದ ಸುಂಕವನ್ನು ಹಿಂದಿರುಗಿಸುವ ಬಗ್ಗೆ ಸ್ಪಷ್ಟ ನಿಯಮ ಇರಲಿಲ್ಲ. ಈ ನಿಯಮವನ್ನು ಆಧರಿಸಿ ಉದ್ಯಮಿಗಳು ಜನವರಿ 12ರ ಗಡುವು ತೀರುವ ಮುನ್ನ ಅರಣ್ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆಯುವ ನಿಯಮವನ್ನೂ ಉಲ್ಲಂಘಿಸಲು ಸಾಧ್ಯವಾಗಿದೆ. ಅರಣ್ಯ ಭೂಮಿಯನ್ನು ಗುತ್ತಿಗೆ ಪಡೆಯುವ ಮುನ್ನ ಅರಣ್ಯ ಹಕ್ಕು  ಮತ್ತು ಸಾಂಪ್ರದಾಯಿಕ ಅರಣ್ಯವಾಸಿಗಳ ಕಾಯ್ದೆಯ ಅನ್ವಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಪರಿಸರ ಸಚಿವಾಲಯ 2016ರ ನವಂಬರ್‍ನಲ್ಲಿ ಸ್ಪಷ್ಟ ಆದೇಶ ಹೊರಡಿಸಿತ್ತು. ಆದರೆ ಜನವರಿ 2017ರ ವೇಳೆಗೆ ಈ ನಿಯಮವನ್ನೂ ಸಡಿಲಗೊಳಿಸಲಾಯಿತು.

ಅರಣ್ಯ ಭೂಮಿಯನ್ನು ಗುತ್ತಿಗೆ ನೀಡುವ ಮುನ್ನ ಆದಿವಾಸಿಗಳ ಹಕ್ಕುಗಳಿಗೆ ಅನುಸಾರವಾಗಿ ಆದಿವಾಸಿ ಸಮಿತಿಗಳ ಸಮ್ಮತಿಯನ್ನು ಪಡೆಯುವುದು ಕಡ್ಡಾಯವಾಗಿದ್ದರೂ ಕೇಂದ್ರ ಸರ್ಕಾರ ಈ ನಿಯಮವನ್ನೂ ಉಲ್ಲಂಘಿಸಿ, ಆದಿವಾಸಿ ಸಮಿತಿಯ ಸಮ್ಮತಿಯನ್ನು ಗಣಿಗಾರಿಕೆ ಆರಂಭಿಸುವ ಮುನ್ನ ಪಡೆದರೆ ಸಾಕು, ಗುತ್ತಿಗೆ ಪಡೆಯುವ ಮುನ್ನ ಬೇಕಿಲ್ಲ ಎಂದು ತೀರ್ಮಾನಿಸಿದೆ.

ತನ್ನ ಜನವರಿ 5ರ ಆದೇಶದಲ್ಲಿ ಸಚಿವಾಲಯ ಈ  ಸಂದೇಶವನ್ನು ನೀಡಿದ್ದು ಗಣಿಗಾರಿಕೆ ಆರಂಭಿಸುವ ಮುನ್ನ ಅರಣ್ಯ ಹಕ್ಕು ಕಾಯ್ದೆಯ ಅನುಸಾರ ಆದಿವಾಸಿಗಳ ಹಕ್ಕುಗಳನ್ನು ಯಾವುದೇ ರೀತಿಯಲ್ಲಿ ಚ್ಯುತಿಗೊಳಿಸುವಂತಿಲ್ಲ ಎಂದು ಸಚಿವಾಲಯ ಹೇಳಿದೆ.  ಒಂದು ವೇಳೆ ಗಣಿಗಾರಿಕೆಗೆ ಗುತ್ತಿಗೆ ನೀಡಿದ ಭೂಮಿಯನ್ನು ಅರಣ್ಯ ಹಕ್ಕು ಕಾಯ್ದೆಯಡಿ ಆದಿವಾಸಿಗಳಿಗೆ ನೀಡಲಾಗಿದ್ದರೆ ಆ ಪ್ರದೇಶವನ್ನು ಹೊರತುಪಡಿಸಲಾಗುವುದು ಎಂದೂ ಹೇಳಲಾಗಿದೆ. ಹೀಗೆ ಹೇಳುತ್ತಲೇ ಕೇಂದ್ರ ಪರಿಸರ ಸಚಿವಾಲಯ ಗುತ್ತಿಗೆ ನೀಡುವ ಮುನ್ನ ಉದ್ಯಮಿಗಳು ಪರಿಸರ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಪಡೆಯುವ ನಿಯಮವನ್ನೂ ಕೈಬಿಟ್ಟಿದೆ. 300ಕ್ಕೂ ಹೆಚ್ಚು ಗಣಿಗಳನ್ನು ಹರಾಜು ಪ್ರಕ್ರಿಯೆಯಿಂದ ತಪ್ಪಿಸುವ ಸಲುವಾಗಿ ಈ ಬದಲಾವಣೆಗಳನ್ನು ಮಾಡಿರುವ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೂ ಆದೇಶ ಹೊರಡಿಸಿ ಕೂಡಲೇ ಗುತ್ತಿಗೆ ನೀಡುವಂತೆ ಆದೇಶಿಸಿದೆ.