ನ್ಯಾಯಾಧೀಶರ ಹುದ್ದೆ ಖಾಲಿ ಸ್ಥಿತಿಗೆ ಹೊಣೆ ಹೊರಲು ಕೇಂದ್ರ ನಕಾರ

ನವದೆಹಲಿ : ದೇಶದ ಹೈಕೋರ್ಟುಗಳಲ್ಲಿ ಈಗ ಸುಮಾರು 1,079 (ಶೇ 43) ನ್ಯಾಯಾಧೀಶರ ಹುದ್ದೆಗಳು ಖಾಲಿ ಬಿದ್ದಿವೆಯಾದರೂ, ಜಡ್ಜುಗಳ ಖಾಲಿ ಹುದ್ದೆ ಭರ್ತಿಗೊಳಿಸುವಲ್ಲಿ ವಿಳಂಬದ ಹೊಣೆ ಹೊತ್ತುಕೊಳ್ಳುವಲ್ಲಿ ಕೇಂದ್ರ ತಯಾರಿಲ್ಲ.

ಅಂಕಿಅಂಶ ಪ್ರಕಾರ, ದೇಶದ ಹೈಕೋರ್ಟುಗಳಲ್ಲಿ 461 ಹುದ್ದೆಗಳು ಖಾಲಿ ಬಿದ್ದಿದ್ದು, ಇದರಲ್ಲಿ ಹೈದರಾಬಾದ್ ಮತ್ತು ಕರ್ನಾಟಕ ಮುಂಚೂಣಿಯಲ್ಲಿದೆ. ಹೈದರಾಬಾದ್ ಹೈಕೋರ್ಟಿನಲ್ಲಿ ಶೇ 60.8(61ರ ಬದಲಿಗೆ 38 ಜಡ್ಜರು ಇದ್ದಾರೆ), ಕರ್ನಾಟಕ ಹೈಕೋರ್ಟಿನಲ್ಲಿ ಶೇ 59 (62 ಜಡ್ಜರ ಬದಲಿಗೆ 37 ಜಡ್ಜರು) ಜಡ್ಜರ ಹುದ್ದೆಗಳು ಖಾಲಿಯಾಗಿವೆ.

ಅಲಹಾಬಾದ್ ಹೈಕೋರ್ಟಿಗೆ ಮಂಜೂರಾದ ಜಡ್ಜರ ಸಂಖ್ಯೆ 160 ಆಗಿದ್ದರೆ, ಈಗ ಬರೇ 77 ಜಡ್ಜರು ಕಾರ್ಯ ನಿರ್ವಹಿಸುತ್ತಿದ್ದಾರೆ. 83 ಹುದ್ದೆಗಳು ಖಾಲಿಯಾಗಿವೆ. ಅಲಹಾಬಾದ್ ಹೈಕೋರ್ಟಿನಲ್ಲಿ ಸುಮಾರು ಶೇ 51, ಛತ್ತೀಸಗಢದಲ್ಲಿ ಶೇ 50 ಮತ್ತು ಅಸ್ಸಾಂನಲ್ಲಿ ಶೇ 45.8 ಜಡ್ಜುಗಳ ಹುದ್ದೆ ಖಾಲಿಯಾಗಿವೆ.

ಜಡ್ಜರ ಹುದ್ದೆಗಳು ಭರ್ತಿಗೊಳಿಸುವಲ್ಲಿ ವಿಳಂಬಕ್ಕೆ ಕಾನೂನು ಸಚಿವಾಲಯ ತನ್ನ ಮೇಲಿನ ಆರೋಪ ನಿರಾಕರಿಸಿದೆ.

ಪರ್ಸನಲ್, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯಿಕ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಈ ವಿಷಯ ಚರ್ಚೆಗೆ ಬಂದಾಗ ಜಡ್ಜರ ಹುದ್ದೆಗಳ ಭರ್ತಿಗೊಳಿಸಲು ಆಗಿರುವ ವಿಳಂಬಕ್ಕೆ “ದೊಡ್ಡ ಕಾರಣಗಳಿವೆ” ಎಂದು ಇಲಾಖೆ ಹೇಳಿದೆ.