ಪಾಶಿಗಿಂತ ಕಡಿಮೆ ನೋವಿನ ಗಲ್ಲುಶಿಕ್ಷೆ ಇಲ್ಲ : ಕೇಂದ್ರ

ಸಾಂದರ್ಭಿಕ ಚಿತ್ರ

ನವದೆಹಲಿ : ಕೈದಿಗಳಿಗೆ ಮರಣದಂಡನೆ ನೀಡುವಲ್ಲಿ ಕುತ್ತಿಗೆಗೆ ನೇಣು ಹಾಕುವುದೇ ಎಲ್ಲ ರೀತಿಯಲ್ಲೂ ಕಾರ್ಯಸಾಧ್ಯ ಮತ್ತು ಉತ್ತಮ ಕ್ರಮ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಹೇಳಿದೆ.

ವಕೀಲ ರಿಷಿ ಮಲ್ಹೋತ್ರ ಸಲ್ಲಿಸಿದ ಪಿಐಎಲ್ ವಿಚಾರಣೆ ವೇಳೆ ಸುಪ್ರೀಂ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ಮೂವರು ಜಡ್ಜುಗಳ ನ್ಯಾಯಪೀಠಕ್ಕೆ ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎ ಎಸ್ ಜಿ) ಪಿಂಕಿ ಆನಂದ್ ಈ ಹೇಳಿಕೆ ನೀಡಿದರು.

ಇತರ ದೇಶಗಳಲ್ಲಿ ಗಲ್ಲು ಶಿಕ್ಷೆಗೆ ಯಾವ ವಿಧಾನ ಬಳಸಲಾಗುತ್ತದೆ ಎಂದು ತಿಳಿಸುವಂತೆ ನ್ಯಾಯಪೀಠದ ಇತರ ಜಡ್ಡುಗಳು ಕಾನೂನು ಅಧಿಕಾರಿಗಳಿಗೆ ಸೂಚಿಸಿದರು. ಗಲ್ಲು ಶಿಕ್ಷೆ (ಪಾಶಿ) ಕ್ರಿಮಿನಲ್ ಪ್ರೊಸಿಜರ್ ಕೋಡಿನ ಸೆಕ್ಷನ್ 354(5)ರಡಿ “ಅನಾಗರಿಕ, ಅಮಾನವೀಯ ಮತ್ತು ಕ್ರೂರ” ಎಂದು ಹೇಳಲಾಗಿದೆ. ಆದ್ದರಿಂದ ಈ ವಿಷಯದಲ್ಲಿ ಮುಂದಿನ ನಾಲ್ಕು ವಾರದೊಳಗೆ ಸೂಕ್ತ ಅಭಿಪ್ರಾಯ ಮಂಡಿಸುವಂತೆ ಸರಕಾರಕ್ಕೆ ನ್ಯಾಯಪೀಠ ಕಾಲಾವಕಾಶ ನೀಡಿದೆ.

ಅಪರಾಧಿಗೆ ಗಲ್ಲುಶಿಕ್ಷೆ ಉತ್ತಮ ಮಾರ್ಗವೇ ಎಂದು ಹೇಳುವಂತೆ ಅಕ್ಟೋಬರ್ 6ರಂದು ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಅಪರಾಧಿಗೆ ಗಲ್ಲುಶಿಕ್ಷೆ ನೀಡುವ ಬದಲಿಗೆ, ಈ ಶಿಕ್ಷೆಗೆ ಕಡಿಮೆ ನೋವಿನ ಇತರ ಯಾವುದಾದರೂ ಕಾನೂನಾತ್ಮಕ ವಿಧಾನ ಅನುಸರಿಸಬಹುದೇ ಎಂದು ಸುಪ್ರೀಂ ಸರ್ಕಾರವನ್ನು ಕೇಳಿತ್ತು.

LEAVE A REPLY