ಮತ್ತೆರಡು ಕೈಗಾ ರಿಯಾಕ್ಟರ್ ಸ್ಥಾಪನೆಗೆ ಕೇಂದ್ರ ಅನುಮತಿ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

 ಕಾರವಾರ : ಇಲ್ಲಿಗೆ ಸಮೀಪದ ಕೈಗಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಎರಡು ರಿಯಾಕ್ಟರುಗಳು ಸೇರಿದಂತೆ ದೇಶದಲ್ಲಿ ಒಟ್ಟು ಹತ್ತು ತಲಾ 700 ಮೆವಾ ಸಾಮಥ್ರ್ಯದ ಸ್ಥಳೀಯ ಪರಮಾಣು  ವಿದ್ಯುತ್ ರಿಯಾಕ್ಟರುಗಳಿಗೆ ಕೇಂದ್ರ ಸರಕಾರ ಬುಧವಾರ ಅನುಮತಿ ನೀಡಿದೆ. ಕೈಗಾದಲ್ಲಿ ಸ್ಥಾಪಿಸಲುದ್ದೇಶಿಸಲಾಗಿರುವ ಎರಡು ರಿಯಾಕ್ಟರುಗಳು ಮುಂದಿನ  ದಶಕದ ಮಧ್ಯ ಭಾಗದಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ವಿದ್ಯುತ್ ಉತ್ಪಾದನೆ ಆರಂಭಿಸಬಹುದೆಂದು ನಿರೀಕ್ಷಿಸಲಾಗಿದೆ.

ಕೈಗಾದ 5ನೇ ಹಾಗೂ 6ನೇ  ಘಟಕಗಳ  ಯೋಜನಾ ಪೂರ್ವ ಚಟುವಟಿಕೆಗಳು ಆರಂಭಗೊಂಡಿದ್ದರೂ  ಇಲ್ಲಿನ ಪ್ರಥಮ ಅತಿ ದೊಡ್ಡ ರಿಯಾಖ್ಟರ್  ಸುಮಾರು 2024-24ರ ಸುಮಾರಿಗೆ ಕಾರ್ಯಾರಂಭಗೊಳ್ಳಬಹುದೆಂದು ಅಂದಾಜಿಸಲಾಗಿದೆ.

ಕರ್ನಾಟಕ ತನಗೆ ಅಗತ್ಯವಿರುವ ಶೇ 27ರಷ್ಟು ವಿದ್ಯುತ್ತನ್ನು ಕೈಗಾ 1ನೇ ಹಾಗೂ 2ನೇ ಘಟಕಗಳಿಂದ ಪಡೆಯುತ್ತಿದ್ದರೆ, 3ನೇ ಮತ್ತು 4ನೇ ಘಟಕಗಳು ಶೇ30ರಷ್ಟು ವಿದ್ಯುತ್ ಬೇಡಿಕೆಯನ್ನು ಈಡೇರಿಸುತ್ತಿವೆ. 5ನೇ ಹಾಗೂ 6ನೇ ಘಟಕ ಕಾರ್ಯಾರಂಭಗೊಂಡಾಗ ರಾಜ್ಯದ ಶೇ 50ರಷ್ಟು ವಿದ್ಯುತ್ ಬೇಡಿಕೆಯನ್ನು ಅದು ಪೂರೈಸಲಿದೆ.

ಕೈಗಾದ ಮೊದಲೆರಡು  220 ಮೆವಾ ಘಟಕಗಳು 2000ರಲ್ಲಿ ಕಾರ್ಯಾರಂಭಗೊಂಡರೆ, 3ನೇ ಮತ್ತು ನಾಲ್ಕನೇ ಘಟಕಗಳು ಕ್ರಮವಾಗಿ 2007ರಲ್ಲಿ ಹಾಗೂ 2011ರಲ್ಲಿ ಆರಂಭಗೊಂಡಿದ್ದವು.